ನೆಲಮಂಗಲ: ತಾಲೂಕಿನ ಪುರಾಣ ಪ್ರಸಿದ್ಧ ಬೈರಶೆಟ್ಟಿಹಳ್ಳಿ ಶ್ರೀಆಂಜನೇಯ ಸ್ವಾಮಿ ಜಾತ್ರಾಮಹೋತ್ಸವ ಸೋಮವಾರ ಸಹಸ್ರಾರು ಸಂಖ್ಯೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪ್ರತಿವರ್ಷದಂತೆ ಈ ವರ್ಷವೂ ಶ್ರೀರಾಮನವಮಿ ಹಬ್ಬದ ಮರುದಿನ ಶ್ರೀಆಂಜನೇಯ ಸ್ವಾಮಿಯ ಜಾತ್ರಾಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ದೇವಾಲಯದ ಜೀಣೋರ್ದ್ಧಾರದ ಹಿನ್ನೆಲೆಯಲ್ಲಿ ಬ್ರಹ್ಮರಥೋತ್ಸವ ಬದಲು ಜಾತ್ರಾ ಮಹೋತ್ಸವವನ್ನೇ ಅದ್ದೂರಿ ಹಮ್ಮಿಕೊಳ್ಳಲಾಗಿತ್ತು. ಭಕ್ತರ ಇಷ್ಟಾರ್ಥ ಈಡೇರಿಸುವ ಆಂಜನೇಯಸ್ವಾಮಿಯನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು.
ಅರವಂಟಿಕೆಯ ವ್ಯವಸ್ಥೆ
ಜಾತ್ರೋತ್ಸವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಸ್ವಾಮಿಯ ಸದ್ಭಕ್ತರಿಗೆ ಸೇವಾಕರ್ತರು ಅರವಂಟಿಕೆಗಳನ್ನು ಹಾಕಿಕೊಂಡು ಅನ್ನಸಂತರ್ಪಣೆ ಏರ್ಪಡಿಸಿ, ಪಾನಕ, ಮಜ್ಜಿಗೆ ವಿತರಿಸಿದರು. ಅದರಲ್ಲೂ ಬೇಸಿಗೆಯ ಬಿಸಿಲನ್ನು ಲೆಕ್ಕಿಸದೆ ದೂರದ ಗ್ರಾಮಗಳ ಭಕ್ತರು ಎತ್ತಿನ ಗಾಡಿ ಮತ್ತು ಟ್ರಾ$್ಯಕ್ಟರ್ಗಳಲ್ಲಿ ಮಜ್ಜಿಗೆ, ಸಿಹಿಪಾನಕ, ಕೋಸಂಬರಿ ತಯಾರಿಸಿಕೊಂಡು ಬಂದು, ಭಕ್ತರಿಗೆ ವಿತರಿಸಿದರು.
ಯುಗಾದಿ ಬಳಿಕ ವಿಜೃಂಭಣೆಯಿಂದ ಜರುಗುವ ಜಾತ್ರಾ ಮಾಹೋತ್ಸವವನ್ನು ವೀಸಲು ಬೆಳಗ್ಗೆಯಿಂದಲೇ ತಾಲೂಕು ಅಲ್ಲದೇ ಗ್ರಾಮಾಂತರ ಜಿಲ್ಲೆಯ ವಿವಿಧ ತಾಲೂಕು ಮತ್ತು ಬೆಂಗಳೂರು ನಗರದಿಂದಲೂ ಸಾವಿರಾರು ಜನರು ಆಗಮಿಸಿ, ದೇವರ ದರ್ಶನ ಪಡೆದರು.
ಗಣ್ಯರ ಭೇಟಿ
ತಾಲೂಕಿನ ಗೊಲ್ಲಹಳ್ಳಿಯ ಪ್ರಸಿದ್ಧ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಎನ್.ಶ್ರೀನಿವಾಸ್, ತಹಸೀಲ್ದಾರ್ ಅಮೃತ್ ಆತ್ರೇಶ್, ಉದ್ಯಮಿ ದೀಪಕ್ಕಿರಣ್, ಹಿತ ಚಿಂತನ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ವಿ.ರಾಮಸ್ವಾಮಿ, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಡಿ.ಹರ್ಷ, ಸದಸ್ಯೆ ಅನಸೂಯ ಸೇರಿದಂತೆ ಹಲವು ಜನಪ್ರತಿನಿಧಿಗಳು, ಗಣ್ಯರು ಭೇಟಿ ನೀಡಿ, ಶ್ರೀಆಂಜನೇಯಸ್ವಾಮಿ ದೇವರ ದರ್ಶನ ಪಡೆದರು. ದೇವಾಲಯ ಪ್ರಧಾನ ಆರ್ಚಕ ರೋಹಿತ್, ಆರ್ಚಕರಾದ ಮನೋಹರ್ ಬಿ.ಎಸ್, ಹರ್ಷವದರ್ನ್, ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್ ಬಿಗಿ ಬಂದೋಬಸ್ತ್
ಜಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.