ಜಿಲ್ಲೆ

ರಾಜ್ಯದಲ್ಲಿ ಮಾದರಿ ಕಟ್ಟಡ ನಿರ್ಮಾಣ

ಬ್ಯಾಡಗಿ: ಕಂದಾಯ, ರೈತಸಂಪರ್ಕ ಕೇಂದ್ರ, ತೋಟಗಾರಿಕೆ, ಹೆಸ್ಕಾಂ ಸೇರಿ ಎಲ್ಲ ಇಲಾಖೆಗಳ ಕಾರ್ಯಾಲಯಗಳನ್ನು ಒಂದೇ ಸಮುಚ್ಚಯದಲ್ಲಿ ನಿರ್ಮಿಸುವ ಮೂಲಕ ರಾಜ್ಯದಲ್ಲಿ ಮಾದರಿ ಕಟ್ಟಡ ನಿರ್ಮಿಸಲು 10 ಕೋ.ರೂ. ಅನುದಾನ ಮಂಜೂರಾತಿಗೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣವನರ ತಿಳಿಸಿದರು.
ತಾಲೂಕಿನ ಕಾಗಿನೆಲೆ ಗ್ರಾಪಂ ಕಾರ್ಯಾಲಯ ಬಳಿಯ ಉರ್ದು ಶಾಲೆಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ, ಶಾಸಕರ ಸನ್ಮಾನ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.
ಸಾರ್ವಜನಿಕರು ಬೇರೆ ಬೇರೆ ಇಲಾಖೆಗಳ ಯೋಜನೆ ಪಡೆಯಲು, ಸಣ್ಣಪುಟ್ಟ ಕೆಲಸಗಳಿಗೆ ದಿನವಿಡೀ ಓಡಾಡುವ ಮೂಲಕ ಸಮಯ ಹಾಗೂ ಹಣ ವ್ಯರ್ಥ ಮಾಡುತ್ತಿದ್ದಾರೆ. ಅಲ್ಲದೆ, ಮಹಿಳೆಯರು, ವೃದ್ಧರು, ಅಂಗವಿಕಲರು ತೊಂದರೆ ಪಡುತ್ತಿದ್ದಾರೆ. ಕೆಲ ಗ್ರಾಮಸ್ಥರು ತಮ್ಮ ಕೆಲಸಕ್ಕೆ ದಿನಗಟ್ಟಲೇ ಕಳೆಯಬೇಕಾದ ಪರಿಸ್ಥಿತಿಯಿದೆ. ಕಾಗಿನೆಲೆ ನಾಲ್ಕು ದಿಕ್ಕಿಗೂ ಒಂದೊಂದು ಕಚೇರಿಗಳಿದ್ದು, ಜನರು ತೀವ್ರ ಸಂಕಟ ಅನುಭವಿಸಬೇಕಿದೆ. ದೂರದ 15-20 ಕಿಮೀ. ವ್ಯಾಪ್ತಿಯ ಜನರು ಬಂದು ಹೋಗಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೇ ಸಮುಚ್ಚಯದಲ್ಲಿ ಉಪತಹಸೀಲ್ದಾರರಿಂದ ಹಿಡಿದು ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಮಾದರಿ ಕಟ್ಟಡ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಗ್ರಾಮದ ಹೊರವಲಯದಲ್ಲಿರುವ 2 ಎಕರೆ ಕಂದಾಯ ಭೂಮಿಯನ್ನು ಕಟ್ಟಡಕ್ಕೆ ಮಂಜೂರಾತಿ ನೀಡಲು ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳು, ಪಿಡಿಒಗಳಿಗೆ ಸೂಚಿಸಲಾಗಿದೆ. ಆ ಸಮುಚ್ಚಯಕ್ಕೆ ಕೆಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಬಸ್ ನಿಲ್ದಾಣ, ಬೆಳಕಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಗುತ್ತೆವ್ವ ದುರುಮುರಗಿ, ಉಪಾಧ್ಯಕ್ಷೆ ಪ್ರೇಮಾ ಜೋಗುಳ, ಇಸ್ಮಾಯಿಲ್ ಹಾವೇರಿ, ಅಯೂಬಖಾನ್ ಮಲ್ಲೂರು, ಅಬ್ದುಲ್‌ಸತ್ತಾರ ಮುಲ್ಲಾ, ರಹಮತ್‌ವುಲ್ಲಾ ಹಾವೇರಿ, ಗುಲಾಬಾಶಾ ಬಾವಾಖಾನ್, ಬಿಆರ್‌ಸಿ ಎಂ.ಎಫ್. ಹುಲ್ಲಾಳ, ದಾನಪ್ಪ ಚೂರಿ, ಎಂ.ಎಸ್. ಪೂಜಾರ, ಮಾರುತಿ ಅಚ್ಚೀಗೇರಿ, ಎಂ.ಎಸ್.ಕೋಟೆಗೌಡ್ರ ಇತರರಿದ್ದರು.