ಜಿಲ್ಲೆ

ಗ್ರಾಹಕರಿಗೆ ತೂಕದಲ್ಲಿ ಮೋಸ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಬ್ಯಾಡಗಿ: ಪಟ್ಟಣದ ಸಂತೆ ಮಾರುಕಟ್ಟೆ ಸೇರಿ ವಿವಿಧೆಡೆ ವ್ಯಾಪಾರಸ್ಥರು ತೂಕ ಮಾಪನ ಇಲಾಖೆಯ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದ ಗ್ರಾಹಕರಿಗೆ ವಸ್ತುಗಳ ಖರೀದಿಯಲ್ಲಿ ಭಾರಿ ನಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸಂತೆ ಮಾರುಕಟ್ಟೆ ಸ್ಥಳಗಳಿಗೆ ಭೇಟಿ ನೀಡಿ ವ್ಯಾಪಾರಸ್ಥರ ಬಳಿ ಇರುವ ತೂಕದ ಯಂತ್ರ, ಸೇರುಗಳನ್ನು ಪರಿಶೀಲಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.
ಸಂತೆ ವ್ಯಾಪಾರಿಗಳು ಕಿಲೋ ತೂಕದ ಕಲ್ಲುಗಳನ್ನು ಬಳಸಬೇಕೆಂಬ ನಿಯಮವಿದೆ. ಶೇ. 25ರಷ್ಟು ವ್ಯಾಪಾರಸ್ಥರು ಕಾಡು ಕಲ್ಲುಗಳನ್ನು ಬಳಸುತ್ತಿದ್ದು, ಇನ್ನುಳಿದ ವ್ಯಾಪಾರಸ್ಥರ ಬಳಿ ಕಾಲು ಕೆಜಿ (250 ಗ್ರಾಂ.) ಸೀಲು ಹಾಕದ ಅಳತೆ ಕಲ್ಲುಗಳಿವೆ. ಅದರ ಮೂಲಕವೇ ಇಡೀ ದಿನದ ವ್ಯಾಪಾರ ಮಾಡುತ್ತಾರೆ.
ಕಡಿಮೆ ತೂಕ: ಸಂತೆ ಹಾಗೂ ಬೀದಿಬದಿ ವ್ಯಾಪಾರಸ್ಥರು ಸ್ಕೇಲ್ ಕಾಟ, ಗಣಕಯಂತ್ರ ತೂಕ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಗ್ರಾಹಕರೊಬ್ಬರು ಸ್ಕೇಲ್ ಕಾಟದಲ್ಲಿ ತೂಕ ಮಾಡಿಸಿ ವಸ್ತು ಖರೀದಿಸಿದ್ದರು. ಸಂಶಯಗೊಂಡು ಅದನ್ನು ಬೇರೆಯವರ ಬಳಿ ತೂಕ ಮಾಡಿಸಿದಾಗ 60 ಗ್ರಾಮ್ ಕಡಿಮೆ ತೂಕ ಕಂಡು ಬಂದಿದೆ.
ಮಾರುಕಟ್ಟೆಯಲ್ಲಿ ಯಾರ ಅಂಜಿಕೆ, ಭೀತಿಯಿಲ್ಲದೆ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ವರ್ಷಕ್ಕೊಮ್ಮೆ ತೂಕದ ಯಂತ್ರಗಳಿಗೆ ಸೀಲು ಹಾಕಿಸಿಕೊಳ್ಳಬೇಕೆಂಬ ನಿಯಮವಿದೆ. ಆದರೆ, ಅದು ಪಾಲನೆ ಆಗುತ್ತಿಲ್ಲ. ಅಧಿಕಾರಿಗಳು ಪರಿಶೀಲಿಸಿ ತಪ್ಪು ಮಾಡಿದವರಿಗೆ ದಂಡ ವಿಧಿಸಬೇಕು ಎಂದು ಗ್ರಾಹಕರು ಆಗ್ರಹಿಸುತ್ತಿದ್ದಾರೆ.
ಕೈಕಾಟ ಹಾವಳಿ ತಡೆಗಟ್ಟಿ: ರೈತರು ಮಾರುಕಟ್ಟೆಗೆ ತಂದ ತರಕಾರಿ, ಸೊಪ್ಪು ತುಂಬಿದ ಚೀಲಗಳನ್ನು ಕೆಲ ಖರೀದಿದಾರರು ಖರೀದಿಸಿ, ಅವುಗಳನ್ನು ಕೈಕಾಟ (ಸ್ಟ್ರೀಂಗ್ ಕಾಟ) ಹಿಡಿಯುತ್ತಾರೆ. ಇದರಲ್ಲಿ ಕೆಲ ರೈತರಿಗೆ ಕೆಜಿ ಲೆಕ್ಕಾಚಾರವೇ ತಿಳಿಯುವುದಿಲ್ಲ, ಚೀಲವೊಂದಕ್ಕೆ ಮೂರ‌್ನಾಲ್ಕು ಕೆಜಿ ಕಡಿಮೆ ತೋರಿಸಿದರೂ ರೈತರಿಗೆ ನಷ್ಟ. ಸಂತೆಯಲ್ಲಿ ಕುಳಿತು ಮಾರಬೇಕೆಂದರೆ, ರೈತರಿಗೆ ಮೀಸಲಿಟ್ಟ ಕಟ್ಟೆಯನ್ನು ವ್ಯಾಪಾರಸ್ಥರೇ ಆಕ್ರಮಿಸಿದ್ದಾರೆ. ಹೀಗಾಗಿ, ರೈತರು ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಹೋಗಬೇಕಿದೆ.
ನಕಲಿ ಸೇರುಗಳ ತಡೆಗಟ್ಟಿ: ಕೆಲ ಕಾಳುಕಡಿ, ಮಂಡಕ್ಕಿ, ಶೇಂಗಾ ವ್ಯಾಪಾರಸ್ಥರು ಕಡಿಮೆ ಅಳತೆಯ ಸೇರುಗಳನ್ನು ಇಟ್ಟುಕೊಂಡಿದ್ದಾರೆ. ಸಾರ್ವಜನಿಕರು ಸೇರುಗಳ ಅಳತೆ ಬಗ್ಗೆ ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಈ ಕುರಿತು ತೂಕ ಮತ್ತು ಮಾಪನ ಅಧಿಕಾರಿಗಳು ಪರಿಶೀಲಿಸಬೇಕು. ಸಂತೆ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಸ್ಥರು ಬಳಸುವ ಕಲ್ಲುಗಳನ್ನು ಪರಿಶೀಲಿಸಬೇಕು. ಗ್ರಾಹಕರಿಗೆ ಆಗುವ ನಷ್ಟವನ್ನು ತಪ್ಪಿಸಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ.

ಸಂತೆಯಲ್ಲಿ ಕೈಕಾಟ, ನಕಲಿ ಸೇರುಗಳು, ಸ್ಕೇಲ್ ಕಾಟಾ, ಕಾಡುಗಲ್ಲುಗಳ ಅಳತೆ ಹೆಚ್ಚಾಗಿದೆ. ಈ ಕುರಿತು ಸಾರ್ವಜನಿಕರು ಯಾರಿಗೆ ದೂರು ಸಲ್ಲಿಸಬೇಕೆಂಬುದೇ ಗೊತ್ತಿಲ್ಲ. ತೂಕ ಮಾಪನ ಅಧಿಕಾರಿಗಳು ಸಂತೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಕಡಿಮೆ ತೂಕದ ಮೂಲಕ ವ್ಯಾಪಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಕವಿತಾ ಕೆ.ಬಿ. ಸ್ಥಳೀಯ ನಿವಾಸಿ ರಾಣೆಬೆನ್ನೂರ ಮತ್ತು ಬ್ಯಾಡಗಿ ತಾಲೂಕಿಗೆ ಒಬ್ಬರೇ ತೂಕಮಾಪನ ಇಲಾಖೆ ಇನ್‌ಸ್ಪೆಕ್ಟರ್ ಇದ್ದೇನೆ. ಆದರೂ ತಿಂಗಳಿಗೊಮ್ಮೆ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದೇನೆ. ಎರಡೂ ತಾಲೂಕಿನಲ್ಲಿ ಸಾಕಷ್ಟು ವ್ಯಾಪಾರಿ ಕೇಂದ್ರ, ಸಂತೆ ಸ್ಥಳಗಳಿವೆ. ತೂಕದಲ್ಲಿ ಮೋಸ ಎಂದು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಪುರಸಭೆ ಅಥವಾ ತೂಕ ಮಾಪನ ಜಿಲ್ಲಾ ಕಚೇರಿಗೆ ಲಿಖಿತ ದೂರು ಸಲ್ಲಿಸಬೇಕು. ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.ಎಂ. ಲಲಿತಾ ತೂಕಮಾಪನ ಇಲಾಖೆ ಇನ್‌ಸ್ಪೆಕ್ಟರ್