ಬ್ಯಾಡಗಿ: ತಾಲೂಕಿನಲ್ಲಿ ಹಾಯ್ದು ಹೋಗಿರುವ ನಾಲ್ಕು ರಾಜ್ಯ ಹೆದ್ದಾರಿಗಳನ್ನು ಗುಣಮಟ್ಟದ ರಸ್ತೆಗಳನ್ನಾಗಿ ನಿರ್ವಿುಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಎಲ್ಲ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಅನುದಾನ ತರುವುದಾಗಿ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ತಾಲೂಕಿನ ಬ್ಯಾಡಗಿ ತಿಳವಳ್ಳಿ ಜಿಲ್ಲಾ ಮುಖ್ಯರಸ್ತೆಯ ಅಂಗರಗಟ್ಟಿಯಿಂದ ಕುಮ್ಮೂರು ಗ್ರಾಮದವರೆಗೂ 6 ಕೋ.ರೂ. ವೆಚ್ಚದ ಡಾಂಬರೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಪ್ರಸಿದ್ಧ ಕ್ಷೇತ್ರಗಳಾದ ಕದರಮಂಡಲಗಿ ಆಂಜನೇಯ, ಗುಡ್ಡದಮಲ್ಲಾಪುರ ಮೂಕಪ್ಪಸ್ವಾಮಿಗಳು, ಕಾಗಿನೆಲೆ ಕನಕದಾಸರ ಗದ್ದುಗೆ ಹಾಗೂ ಗುರುಪೀಠ, ಬ್ಯಾಡಗಿ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆ, ಹಾಗನಲ್ಲ ಕುಮಾರಶ್ರೀಗಳ ಜನ್ಮಭೂಮಿ ಜೋಯಿಸರಹಳ್ಳಿ ಸೇರಿದಂತೆ ವಿವಿಧ ಸ್ಥಳಗಳಿಗೆ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ತಾಲೂಕಿನ ಎಲ್ಲ ರಸ್ತೆಗಳ ತಗ್ಗುಗುಂಡಿಗಳನ್ನು ಮುಚ್ಚಲು ಹಾಗೂ ರಸ್ತೆ ಅಭಿವೃದ್ಧಿಗೆ 2 ಕೋ.ರೂ. ಮಂಜೂರಾಗಿದ್ದು ಕಾಮಗಾರಿ ಆರಂಭವಾಗಿದೆ. ಬ್ಯಾಡಗಿ ತಿಳವಳ್ಳಿ ರಸ್ತೆಯ ಅಂಗರಗಟ್ಟಿ ಗ್ರಾಮದಿಂದ 12 ಕಿ.ಮೀ. ದೂರದವರೆಗೆ 6 ಕೋ.ರೂ. ವೆಚ್ಚದಲ್ಲಿ ಮರುಡಾಂಬರೀಕರಣಗೊಳಿಸಲಾಗುತ್ತಿದೆ ಎಂದರು.
ತಾಲೂಕಿನ ಬಹುತೇಕ ರಸ್ತೆಗಳಲ್ಲಿ ಪೈಪ್ಲೈನ್ ಸಲುವಾಗಿ ರಸ್ತೆಯಲ್ಲಿ ಅಲ್ಲಲ್ಲಿ ಕಾಲುವೆ ತೆಗೆದು ಮುಚ್ಚದೆ ಬಿಡಲಾಗಿದೆ. ಇದರಿಂದ ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲ ವಾಹನಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಕಾಲುವೆಗಳಿಗೆ ಡಾಂಬರೀಕರಣ ಮಾಡಬೇಕು. ರಸ್ತೆಗಳಲ್ಲಿ ಅಗತ್ಯವಿದ್ದಲ್ಲಿ ಮಾತ್ರ ಹಂಪ್ಸ್ಗಳನ್ನು ಹಾಕಬೇಕು. ತೀರಾ ಅಗತ್ಯವಿದ್ದ ರಸ್ತೆಗೆ ಅಳವಡಿಸಿದಲ್ಲಿ ಎರಡೂ ಕಡೆಗೂ ಸಿಗ್ನಲ್ ಹಾಗೂ ಬಳಿ ಬಣ್ಣದ ಗೆರೆಗಳನ್ನು ಹಾಕುವಂತೆ ಸೂಚಿಸಿದರು.
ಜಿ.ಪಂ. ಮಾಜಿ ಸದಸ್ಯ ಅಬ್ದುಲ್ವುುನಾಫ್ಸಾಬ ಎಲಿಗಾರ, ಅಕ್ರಮ ಸಕ್ರಮ ಸಮಿತಿ ಸದಸ್ಯ ರುದ್ರಪ್ಪ ಹೊಂಕಣ, ಮಹೇಶಗೌಡ್ರ ಪಾಟೀಲ, ಮಾರುತಿ ಅಂಚಟಗೇರಿ, ದಾನಪ್ಪ ಚೂರಿ, ಗಿರೀಶ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಎಂ.ಎನ್. ಹಾವೇರಿ ಇತರರಿದ್ದರು.