ಬ್ಯಾಡಗಿ: ತಾಲೂಕಿನಲ್ಲಿ ಒಂದೆಡೆ ಡೆಂಘೆ ಜ್ವರದ ಪ್ರಕರಣಗಳ ಸಂಖ್ಯೆ ದಿನೇದಿನೆ ಏರಿಕೆ ಕಾಣುತ್ತಿದ್ದರೆ, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ಇಲಿಜ್ವರದ ಪ್ರಕರಣ ಪತ್ತೆಯಾಗುತ್ತಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ತಾಲೂಕಿನ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಂಘೆ ಪ್ರಕರಣ ಸಂಖ್ಯೆ ಮೂರು ಪಟ್ಟು ಏರಿದೆ. ನಾಲ್ಕು ತಿಂಗಳಲ್ಲಿ ಡೆಂಘೆಯಿಂದ ಮೂವರು ಮೃತಪಟ್ಟಿದ್ದಾರೆ. ಒಬ್ಬರಿಗೆ ಡೆಂಘೆ ಜ್ವರ ಖಚಿತವಾಗಿದ್ದು, ಇಬ್ಬರು ಶಂಕಿತರೆಂದು ತಿಳಿದುಬಂದಿದೆ. ಬಹುತೇಕರು ಸಣ್ಣಪುಟ್ಟ ಜ್ವರವೆಂದು ತಿಳಿದು, ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜ್ವರ ಉಲ್ಬಣಿಸಿದ ಬಳಿಕ ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ತಾಲೂಕಿನಲ್ಲಿ 2024 ಜನವರಿಯಿಂದ ಜು. 13ವರೆಗೆ 90 ಡೆಂೆ ಜ್ವರ ಪ್ರಕರಣ ಪತ್ತೆಯಾಗಿದ್ದು, ಕಳೆದ 20 ದಿನಗಳಲ್ಲಿ ಡೆಂಘೆ ಜ್ವರ ಪ್ರಕರಣಗಳ ಸಂಖ್ಯೆ 25 ದಾಟಿದೆ. ಕದರಮಂಡಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 35, ಚಿಕ್ಕಬಾಸೂರು 21, ಶಂಕ್ರಿಪುರ 11, ಬ್ಯಾಡಗಿ ಹಾಗೂ ಕಾಗಿನೆಲೆ 24 ಡೆಂಘೆ ಜ್ವರ ಪ್ರಕರಣ ಪತ್ತೆಯಾಗಿವೆ. ಕದರಮಂಡಲಗಿ ಹಾಗೂ ಚಿಕ್ಕಬಾಸೂರಲ್ಲಿ ದಿನೇದಿನೆ ಜ್ವರ ಬಾಧಿತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ, ತಾಲೂಕಾಸ್ಪತ್ರೆಯಿಂದ ಪ್ರತಿದಿನ 5 ರಿಂದ 10 ಜನ ರೋಗಿಗಳ ರಕ್ತ ಸಂಗ್ರಹಿಸಿ ತಪಾಸಣೆಗೆ ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿದೆ.
ಇಲಿ ಜ್ವರ ಪ್ರಕರಣ ಪತ್ತೆ: ತಾಲೂಕಿನಲ್ಲಿ ಈವರೆಗೂ ಡೆಂಘೆ ಹಾಗೂ ಚಿಕೂನ್‌ಗುನ್ಯಾ ಸೇರಿ ಬೇರೆ ಬೇರೆ ಜ್ವರ ಪ್ರಕರಣ ಪತ್ತೆಯಾಗಿದ್ದವು. ಇದೇ ಮೊದಲ ಬಾರಿಗೆ ಒಂದೇ ವಾರದಲ್ಲಿ ತಾಲೂಕಿನ ಶಿಡೇನೂರು 2, ಚಿಕ್ಕಬಾಸೂರು 4, ಕೆರೂಡಿ 2 ಸೇರಿ ಒಟ್ಟು 8 ಇಲಿ ಜ್ವರ ಪ್ರಕರಣ ಪತ್ತೆಯಾಗಿವೆ. ಕಳೆದ ವಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಲ್ಲಿ ಜ್ವರ ಕಾಣಿಸಿಕೊಂಡಿತ್ತು. ಈಗ ಬ್ಯಾಡಗಿಗೂ ಕಾಲಿರಿಸಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ.
ಇಲಿಗಳ ಮಲಮೂತ್ರದಿಂದ ಮನುಷ್ಯನ ದೇಹ ಸೇರುವ ಈ ಕಾಯಿಲೆ ಬಗ್ಗೆ ಜಾಗೃತಿ ತೀವ್ರ ಅಗತ್ಯವಾಗಿದೆ. ಮತ್ತೊಂದು ಆಘಾತಕಾರಿ ವಿಚಾರವೆಂದರೆ, ಇಲಿ ಜ್ವರವನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆ ಮಾಡಲು ಸಾಧ್ಯವಿಲ್ಲ. ಸರ್ಕಾರಿ ಆಸ್ಪತ್ರೆಯ ರಕ್ತ ತಪಾಸಣೆ ಕೇಂದ್ರದಲ್ಲಿ ಪತ್ತೆ ಮಾಡಲಾಗುತ್ತಿದ್ದು, ಜ್ವರ ಬಂದ ರೋಗಿಗಳಿಂದ ರಕ್ತ ಸಂಗ್ರಹಿಸಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿ ವರದಿ ಬಂದ ಬಳಿಕ ಪ್ರಕರಣ ಕುರಿತು ಸ್ಪಷ್ಟೀಕರಿಸಲಾಗುತ್ತಿದೆ. ಜನರು ಜ್ವರಬಾಧೆ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಬರಬೇಕು. ನಿರ್ಲಕ್ಷ್ಯತೋರಿದಲ್ಲಿ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ. ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಲ್ಲಿ ಬೇಗ ಗುಣಪಡಿಸಬಹುದು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಪ್ರತಿ ಶುಕ್ರವಾರ ಸಭೆ: ತಾಲೂಕಿನ ಎಲ್ಲ ಗ್ರಾಪಂ ಕೇಂದ್ರದಲ್ಲಿ ಜಿಪಂ ಸಿಇಒ ಆದೇಶದಂತೆ ಪ್ರತಿ ಶುಕ್ರವಾರ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿ, ಸ್ಥಳೀಯ ಶಿಕ್ಷಕರು, ಆಶಾ, ಆರೋಗ್ಯ ಕಾರ್ಯಕರ್ತರು ಹಾಗೂ ಪಂಚಾಯತಿ ಆರೋಗ್ಯ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಸಭೆ ಬಳಿಕ ಗ್ರಾಮದ ಮನೆಗಳಿಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಿ, ಲಾರ್ವಾ ಪತ್ತೆಯಾದ ನೀರು ಚೆಲ್ಲಿ, ಸ್ವಚ್ಛ ನೀರು ಸಂಗ್ರಹಿಸಲು ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಗುತ್ತಿದೆ.
ತಾಲೂಕಿನಲ್ಲಿ ಡೆಂಘೆ, ಇಲಿ ಜ್ವರ ಸೇರಿ ಸಾಂಕ್ರಾಮಿಕ ರೋಗಗಳು ಪತ್ತೆಯಾಗಿವೆ. ಆರೋಗ್ಯ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ನಡೆಸಿದ್ದೇವೆ. ಡೆಂಘೆ ಪ್ರಕರಣಗಳಲ್ಲಿ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಹೊಸದಾಗಿ ತಾಲೂಕಿನಲ್ಲಿ 8 ಜನರಿಗೆ ಇಲಿ ಜ್ವರ ರೋಗದ ಪ್ರಕರಣ ಪತ್ತೆಯಾಗಿವೆ. ಎಲ್ಲದಕ್ಕೂ ಔಷಧ ಲಭ್ಯವಿದ್ದು, ಸಾರ್ವಜನಿಕರು ಆತಂಕ್ಕೊಳಗಾಗಬಾರದು.ಡಾ. ಕಾಂತೇಶ ಭಜಂತ್ರಿ ತಾಲೂಕು ವೈದ್ಯಾಧಿಕಾರಿ ಗ್ರಾಮೀಣ ಪ್ರದೇಶದ ಜನರಲ್ಲಿ ಜ್ವರಬಾಧೆ ತೀವ್ರವಾಗಿದೆ. ಆರೋಗ್ಯ ಇಲಾಖೆ ತುರ್ತಾಗಿ ವಾರಕ್ಕೊಮ್ಮೆ ವೈದ್ಯರ ತಂಡದೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳದಲ್ಲಿಯೇ ಚಿಕಿತ್ಸೆ ನೀಡಬೇಕು. ಇಲಿಜ್ವರ ಬಾಧೆ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಇಂತಹ ಕಾಯಿಲೆಗಳ ಚಿಕಿತ್ಸೆಗೆ ಖಾಸಗಿ ಕ್ಲಿನಿಕ್‌ಗಳಲ್ಲಿ ದುಬಾರಿ ಹಣ ಪಡೆಯುವುದಕ್ಕೆ ಕಡಿವಾಣ ಹಾಕಬೇಕು.ಶಶಿಧರಸ್ವಾಮಿ ಛತ್ರದಮಠ ರೈತ ಹೋರಾಟಗಾರ