ಬ್ಯಾಡಗಿ: ಶ್ರಾವಣ ಮಾಸದಲ್ಲಿ ಧರ್ಮ ಕಾರ್ಯ ಹಾಗೂ ದೇವರ ದರ್ಶನದಿಂದ ಪುಣ್ಯ ಪ್ರಾಪ್ತಿಯಾಗಲಿದೆ ಎಂದು ದಾನಮ್ಮದೇವಿ ಸೇವಾ ಸಮಿತಿ ಅಧ್ಯಕ್ಷೆ ಮಹೇಶ್ವರಿ ಪಸಾರದ ಹೇಳಿದರು.ತಾಲೂಕಿನ ದಾನೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಮಾವಾಸ್ಯೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ 1008 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎರಡು ದಶಕದಿಂದ ಶ್ರಾವಣ ಮಾಸದಲ್ಲಿ ಮಹಿಳೆಯರಿಗೆ ಉಡಿತುಂಬುವ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದೇವೆ. ಸೇವಾ ಸಮಿತಿಯಲ್ಲಿ ಎಲ್ಲ ಪದಾಧಿಕಾರಿಗಳು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. 1008 ಮಹಿಳೆಯರಿಗೆ ಉಡಿತುಂಬುವ ಸಂಕಲ್ಪ ಮುನ್ನಡೆದಿದೆ ಎಂದರು. ಇದಕ್ಕೂ ಮುನ್ನ ಶ್ರೀ ದಾನಮ್ಮದೇವಿಗೆ ವಿಶೇಷ ಪೂಜೆ, ಹೋಮ- ಹವನಗಳು ನಡೆದವು. ಪುರಸಭೆ ಸದಸ್ಯೆ ಗಾಯತ್ರಿ ರಾಯ್ಕರ, ಕವಿತಾ ಸೊಪ್ಪಿನಮಠ, ಸರೋಜಾ ಉಳ್ಳಾಗಡ್ಡಿ, ಸುಮಂಗಲಾ ಅಂಗಡಿ, ದ್ರಾಕ್ಷಾಯಿಣಿ ಹರಮಗಟ್ಟಿ, ಕಲ್ಪನ ಹೊಂಬರಡಿ, ಅನುರಾಧಾ ಮೋರಗೇರಿ, ಕಾವ್ಯಾ ಕಿರಣಕುಮಾರ, ಸುನೀತಾ ದಾನಪ್ಪನವರ, ಗೀತಾ ಉಬ್ಬೂರು, ಅಶ್ವಿನಿ ಕುಂಚೂರು, ಜಯಲಕ್ಷ್ಮೀ ನಾರಾಯಣಪುರ, ನೇತ್ರಾ ಹವಳದ, ಶಶಿಕಲಾ ಹಂಜಿ, ಕವಿತಾ ಬರದೂರು ಇತರರಿದ್ದರು.