ಅಳವಂಡಿಯಲ್ಲಿ ಆಯೋಜಿಸಿದ್ದ ಬದಲಾವಣೆಗಾಗಿ ಚರಕ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು. ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ ಡಾ.ಶ್ರೀಧರ ಇತರರು ಇದ್ದರು. 
ಜಿಲ್ಲೆ

ಯೋಗ-ಧ್ಯಾನದಿಂದ ಆರೋಗ್ಯ ವೃದ್ಧಿ

ಅಳವಂಡಿ: ಆಯುರ್ವೇದಕ್ಕೆ ಕಾಯಿಲೆ ಮೂಲವನ್ನು ನಾಶ ಮಾಡುವ ಶಕ್ತಿ ಇದೆ ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

ಗ್ರಾಮದ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮುಂಡರಗಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಿಂದ ಆಯೋಜಿಸಿದ್ದ ಬದಲಾವಣೆಗಾಗಿ ಚರಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.
ಶರೀರದಲ್ಲಿನ ಸಕಲ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪರಿಹಾರ ಇದೆ. ಕಾರಣ ಜನ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳಬೇಕು.

ಇತ್ತೀಚಿನ ವರ್ಷಗಳಲ್ಲಿ ಜನ ಯಾಂತ್ರೀಕೃತ ಜೀವನಕ್ಕೆ ಮೊರೆ ಹೋಗಿದ್ದಾರೆ. ಶರೀರಕ್ಕೆ ಬೇಕಾದ ಚಟುವಟಿಕೆಗಳು ಕಡಿಮೆಯಾಗಿವೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆರೋಗ್ಯ ಸದೃಢವಾಗಿರಬೇಕಾದರೆ ಯೋಗ-ಧ್ಯಾನವನ್ನು ಮಾಡಬೇಕು ಎಂದರು.

ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಜನ ಆಯುರ್ವೇದದತ್ತ ಮೊರೆ ಹೋಗುತ್ತಿದ್ದಾರೆ. ಮಾನಸಿಕ ಆರೋಗ್ಯ ಹಾಗೂ ದೈಹಿಕ ಸದೃಢತೆ ಕಾಯ್ದುಕೊಳ್ಳಲು ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದರು.