ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿ ಚುಟುಕು ಪ್ರವಾಸವು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಿಡುವಿಲ್ಲದ ಸಭೆಗಳ ಬಳಿಕ ಬೆಂಗಳೂರಿಗೆ ಮರಳಿದ್ದ ಅವರು ಶನಿವಾರ ಸಂಜೆ ದೆಹಲಿಗೆ ಭೇಟಿ ನೀಡಿ ತಡರಾತ್ರಿಯೇ ಮರಳಿದ್ದಾರೆ ಎನ್ನಲಾಗಿದ್ದು, ಕಾವೇರಿ ನಿವಾಸದಲ್ಲಿ ಬಿಎಸ್ವೈ ಅವರನ್ನು ಭೇಟಿಯಾಗಿ ಪ್ರವಾಸದ ವರದಿಯನ್ನು ಒಪ್ಪಿಸಿದ್ದಾರೆ. ಈ ವೇಳೆ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ವಸ್ತುಸ್ಥಿತಿ, ಕೈಗೊಂಡ ಚಟುವಟಿಕೆಗಳು ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ವಿಜಯೇಂದ್ರ ವಿಚಾರ ವಿನಿಮಯ ನಡೆಸಿದರು.
ಚರ್ಚೆಯ ಗಿರಕಿ: ದೆಹಲಿಯಲ್ಲಿ ಯಾವ ನಾಯಕರನ್ನು ಸಿಎಂ ಪುತ್ರ ಭೇಟಿ ಮಾಡಿ, ಏನು ಮಾತುಕತೆ ನಡೆಸಿದರು ಎನ್ನುವುದು ನಿಖರವಾಗಿ ಗೊತ್ತಾಗಿಲ್ಲ. ಆದರೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಸುತ್ತ ಚರ್ಚೆಯು ಗಿರಕಿ ಹೊಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎನ್.ಆರ್. ಸಂತೋಷ್ಗೂ ಕೊಕ್?: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ಗೂ ಕೊಕ್ ನೀಡುವ ಸಿದ್ಧತೆಗಳು ಸಿಎಂ ಕಚೇರಿಯಲ್ಲಿ ನಡೆದಿವೆ ಎಂಬ ಸುಳಿವು ಹೊರ ಬಿದ್ದಿದೆ. ಆ ಮೂಲಕ ಅವರಾಗಿಯೇ ರಾಜೀನಾಮೆ ನೀಡಬೇಕು ಎಂಬ ಸಂದೇಶ ರವಾನೆಯಾಗಿದೆ. ಇಲ್ಲವಾದರೆ ಹುದ್ದೆಯಿಂದ ಬಿಡುಗಡೆ ಮಾಡುವ ಆದೇಶ ಕೆಲವು ದಿನಗಳಲ್ಲಿ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.