ಹೊಳೆನರಸೀಪುರ: ಮನುಷ್ಯನಲ್ಲಿರುವ ಅಹಂಕಾರ, ಕೋಪ, ತಾತ್ಸಾರ ಮನೋಭಾವ ಹೋಗಬೇಕಾದರೆ ಜಪ, ದಾನ, ಧರ್ಮ ಮಾಡುವ ಜತೆಗೆ ಶ್ರೀ ಭಗವಾನ್ ಸರಸ್ವತೀ ಮಹಾರಾಜ್ ಅವರಂತಹ ಜ್ಞಾನಿಗಳ ಕೃಪೆ ಹಾಗೂ ಸಹವಾಸದಿಂದ ತೊಡೆದು ಹಾಕಲು ಸಾಧ್ಯೆಂದು ಶ್ರೀಕ್ಷೇತ್ರ ಹಿರಿಯೂರು ಶ್ರೀ ದತ್ತಾಶ್ರಮದ ಶ್ರೀ ಸುಬೋದಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶಂಕರಮಠದಲ್ಲಿ ಗುರುವಾರ ಶ್ರೀ ಭಗವಾನ್ ಸರಸ್ವತೀ ಮಹಾರಾಜ್ ಅವರ 14ನೇ ವರ್ಷದ ಸನ್ಯಾಸ ಸ್ವೀಕಾರ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಸನ್ಯಾಸಿಗಳ ಸಹವಾಸದಿಂದ ಮನಸ್ಸಿನಲ್ಲಿ ಒಂದು ರೀತಿಯ ಸಕರಾತ್ಮಕ ಶಕ್ತಿ ಉಂಟಾಗುತ್ತದೆ. ಅಂದರೆ ದೇಹದಲ್ಲಿರುವ ನಕಾರಾತ್ಮಕ ಶಕ್ತಿಗಳು ನಿರ್ಜೀವವಾಗಿ, ಜೀವನದಲ್ಲಿ ಉತ್ಸಾಹ ಬರುತ್ತದೆ. ಪೂಜ್ಯ ಗುರುಗಳು ಸಾನ್ನಿಧ್ಯ ವಹಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಜೀವನವನ್ನು ನಾಶಪಡಿಸುವ ಶಕ್ತಿಗಳನ್ನು ತೊಡೆದು ಹಾಕಿ, ಅಶುಭ ಹಾಗೂ ಅಶುದ್ಧತೆಯನ್ನು ಬಿಡುವ ಮನಸ್ಥಿತಿ ಪಡೆಯಲು ಸಾಧ್ಯ ಎಂದರು.
ಬೆಂಗಳೂರಿನ ಶ್ರೀ ಸತೀಶ್ ಗುರೂಜಿ, ನಟ ಶ್ರೀಧರ್ ಹಾಗೂ ಗುರುಭಕ್ತರು ಉಪಸ್ಥಿತರಿದ್ದರು.