ಶಿಕಾರಿಪುರ ತಾಲೂಕಿನ ಕೊರಟಿಕೆರೆಯ ದೊಡ್ಡಕೆರೆಗೆ ಬಿ.ವೈ.ವಿಜಯೇಂದ್ರ ಬಾಗಿನ ಅರ್ಪಿಸಿದರು. ಕೆ.ಎಸ್.ಗುರುಮೂರ್ತಿ, ವೀರೇಂದ್ರ ಪಾಟೀಲ್, ಯೋಗೀಶ್, ಕುಬೇರಪ್ಪ ಇತರರಿದ್ದರು.  
ಜಿಲ್ಲೆ

ತಿಂಗಳಾಂತ್ಯಕ್ಕೆ ಶಿಕಾರಿಪುರ ತಾಲೂಕಿನ ಎಲ್ಲ ಕೆರೆಗಳಿಗೂ ನೀರು

ಶಿಕಾರಿಪುರ: ಶಾಶ್ವತ ನೀರಾವರಿ ಯೋಜನೆಯಡಿಯಲ್ಲಿ ಸೆಪ್ಟೆಂಬರ್ ಅಂತ್ಯದೊಳಗೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ತುಂಬಿ ಹರಿಯುತ್ತಿರುವ ತಾಲೂಕಿನ ಕೊರಟಿಕೆರೆ ದೊಡ್ಡಕೆರೆಗೆ ಶುಕ್ರವಾರ ಬಾಗಿನ ಸಮರ್ಪಿಸಿ ಮಾತನಾಡಿ, ಪ್ರಕೃತಿ ವೈಪರೀತ್ಯ, ಅಕಾಲಿಕ ಮಳೆ ಹಾಗೂ ಬರಗಾಲದಿಂದ ಜನ ತತ್ತರಿಸುತ್ತಿದ್ದಾರೆ ಎಂದರು.
ನಮ್ಮದು ಅರೆ ಮಲೆನಾಡು. ಮಲೆನಾಡು ಬಯಲು ಸೀಮೆಗೆ ಬೆಸೆದು ಕೊಂಡಿರುವ ಪ್ರದೇಶ. ಇಲ್ಲಿ ಮಳೆಯನ್ನು ನಂಬಿ ಬೆಳೆ ಬೆಳೆಯುವವರು ಜಾಸ್ತಿ. ಬೇಸಿಗೆಯಲ್ಲಿ ಕೆರೆಗಳೆಲ್ಲ ಬತ್ತುವುದರಿಂದ ಬೆಳೆಗಳಿಗೆ ಕೊಳವೆಬಾವಿ ಮೂಲಕ ನೀರುಣಿಸುತ್ತಾರೆ. ಇದನ್ನು ಮನಗಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪರಿಶ್ರಮದಿಂದ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಂಡಿದೆ. ಶಿಕಾರಿಪುರ ತಾಲೂಕಿನ ಉಡಗಣಿ, ತಾಳಗುಂದ, ಹೊಸೂರು ಹೋಬಳಿಯ 279 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ದೊರೆತಿದೆ. ಇದರಲ್ಲಿ 93 ಕೆರೆಗಳು ಶೇ.100 ತುಂಬಿದ್ದು 29 ಕೆರೆಗಳು ಶೇ.50 ತುಂಬಿವೆ ಎಂದು ಮಾಹಿತಿ ನೀಡಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯೋಗೀಶ್, ಶಕ್ತಿಕೇಂದ್ರದ ಅಧ್ಯಕ್ಷ ಕುಬೇರಪ್ಪ, ಪ್ರಮುಖರಾದ ಚಂದ್ರಶೇಖರಪ್ಪ, ಜಗದೀಶ ಇತರರಿದ್ದರು.

ವಿದ್ಯುತ್ ಅಭಾವದಿಂದ ಕೊಂಚ ಹಿನ್ನಡೆ
ಹಗಲಿನಲ್ಲಿ ವಿದ್ಯುತ್ ಅಭಾವದಿಂದಾಗಿ ಎಲ್ಲ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಬಿ.ವೈ.ರಾಘವೇಂದ್ರ ಹಾಗೂ ನನ್ನ ನೇತೃತ್ವದಲ್ಲಿ ನೀರಾವರಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಶಿಕಾರಿಪುರ ತಾಲೂಕಿನ ಎಲ್ಲ ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದ್ದೇವೆ. ಆ ಮೂಲಕ ಶಿಕಾರಿಪುರ ಎಂದಿನಂತೆ ಸಮೃದ್ಧಿಯ ಬೀಡಾಗಿಸುವ ಗುರಿ ಹೊಂದಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.