ಗೋಕರ್ಣ: ಲಲಿತೋಪಾಖ್ಯಾನ ಶ್ರವಣ ಜೀವಕ್ಕೆ ಕ್ಷೇಮವನ್ನೂ, ಆತ್ಮಕ್ಕೆ ಬೆಳಕನ್ನೂ, ದಗ್ಧ ಬದುಕಿಗೆ ಸಂಜೀವಿನಿಯನ್ನೂ ಕರುಣಿಸುವಂತಹದ್ದಾಗಿದೆ. ಈ ಆಖ್ಯಾನ ಕದನಾನಿ ನಾಶಂ ಪ್ರಯಾಂತಿ. ಅಂದರೆ ಆಖ್ಯಾನ ಜೀವನದಲ್ಲಿನ ಕಲಹಗಳನ್ನು ನಾಶ ಮಾಡುತ್ತದೆ ಎಂಬ ಪ್ರತೀತಿ ಇದೆ ಎಂದು ನವರಾತ್ರಿ ನಮಸ್ಯಾ ನಿಮಿತ್ತ ಸಾಗರದ ಶ್ರೀ ರಾಘವೇಶ್ವರ ಸಭಾಭವನದಲ್ಲಿ ನಡೆಯುತ್ತಿರುವ ಲಲಿತೋಪಾಖ್ಯಾನ ಪ್ರವಚನದ 12ನೆ ದಿನ ಶುಕ್ರವಾರ ಭಂಡಾಸುರ ವಧೆಯನ್ನು ಬಣ್ಣಿಸುತ್ತ ಸಮಸ್ತ ಭಕ್ತರನ್ನು ಆಶೀರ್ವದಿಸಿದರು.
ಇಡೀ ಲಲಿತೋಪಾಖ್ಯಾನವಲ್ಲ, ಕೇವಲ ಭಂಡಾಸುರ ಚರಿತ್ರೆಯನ್ನು ಕೇಳಿದರೂ ಸಾಕು ಅಸೇಷ ಸಿದ್ಧಿಯಿದೆ. ’ಇಮಂ ಪವಿತ್ರಂ ಲಲಿತಾ ಪರಾಕ್ರಂ. ಸಮಸ್ತ ಪಾಘ್ನಂ ಅಸೇಷ ಸಿದ್ಧಿದಂ’. ಪವಿತ್ರ ಲಲಿತಾ ಪರಾಕ್ರಮ ಸರ್ವ ಪಾಪವನ್ನು ಸುಟ್ಟು ಯಾವತ್ತೂ ಕ್ಷೀಣಿಸದ ಸಿದ್ಧಿ ಪ್ರದಾಯಿನಿ ಎಂದು ವರ್ಣಿಸಲಾಗಿದೆ. ಇದರ ಕೇಳುವಿಕೆ ಇಹಲೋಕದಲ್ಲಿ ಇಚ್ಛಿತ ಸರ್ವ ಸುಖವನ್ನು ಒದಗಿಸಿ ಅಷ್ಟ ಸಿದ್ಧಿಯನ್ನು ನೀಡುತ್ತದೆ. ಜೊತೆಗೆ ಪರಲೋಕದಲ್ಲಿ ಮುಕ್ತಿಗೆ ಕಾರಣವಾಗುತ್ತದೆ. ನಾಲ್ಕು ದಿನ ಪರ್ಯಂತ ನಡೆದ ಶಕ್ತಿಸೇನೆ ಮತ್ತು ದೈತ್ಯಸೇನೆ ಮಧ್ಯದ ಮಹಾಯುದ್ಧದಲ್ಲಿ ಶ್ರೀ ಲಲಿತಾ ತ್ರಿಪುರಸುಂದರಿ ಹಲವು ಅವತಾರಗಳ ಮರು ಸೃಷ್ಟಿಯ ಮುಖೇನ ಸಮಸ್ತ ಭಂಡಸೇನೆಯನ್ನು ನಾಶಗೊಳಿಸುತ್ತಾಳೆ ಎಂದು ವಿವರಿಸಿದರು.
ನಾರಾಯಣ ದಶಾಕೃತಿ:
ಕರಾಂಗುಲಿ ನಖೋತ್ಪನ್ನ ನಾರಾಯಣ ದಶಾಕೃತಿ. ಭಂಡಾಸುರ ಬಿಟ್ಟ ಎಲ್ಲ ಬಾಣಗಳಿಗೆ ಪ್ರತಿ ಬಾಣ ಪ್ರಯೋಗಿಸಿ ಎಲ್ಲ ಬಾಣಗಳನ್ನು ಉಪಶಮನ ಮಾಡಿದ ಶ್ರೀ ಲಲಿತೆ ಪತಿ ಕಾಮೇಶ್ವರನತ್ತ ನೋಟಬೀರಿ ದೊಡ್ಡದಾಗಿ ನಗುತ್ತಾಳೆ. ಆ ನಗುವಿನಿಂದ ಶ್ರೀದುರ್ಗೆಯ ಆವಿರ್ಭಾವವಾಗುತ್ತದೆ. ಆ ನಂತರದಲ್ಲಿ ಶ್ರೀ ಲಲಿತೆ ತನ್ನ ಕರಗಳ ಬೆರಳು ಮತ್ತು ಉಗುರುಗಳಿಂದ ಶ್ರೀ ಮನ್ನಾರಾಯಣನ ದಶಾಕೃತಿಗಳನ್ನು ಸೃಜಿಸುವ ಮೂಲಕ ರಾಮಾಯಣ, ಮಹಾಭಾರತ, ಭಾಗವತಗಳಲ್ಲದೆ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹಾದಿ ಸಮಸ್ತ ಭಗವತ್ ಅವತಾರಗಳು ಮತ್ತೆ ಧರೆಗಿಳಿಯುವಂತೆ ಮಾಡುವಳು. ನಾಲ್ಕನೇ ದಿನದ ಸೂರ್ಯಾಸ್ತ ಸಮಯಕ್ಕೆ ಮಹಾನಾರಾಯಣಾಸ್ತ್ರ ಪ್ರಯೋಗದಿಂದ ಭಂಡಾಸುರನ ಸಮಸ್ತ ಅಕ್ಷೋಹಿಣಿ ಸೇನೆಯನ್ನು ಭಸ್ಮಗೈಯ್ಯುವಳು. ಕೊನೆಯಲ್ಲಿ ಮಹಾಕಾಮೇಶ್ವರ ಅಸ್ತ್ರವನ್ನು ಮಂತ್ರಿಸಿ ಒಂದಿನಿತು ಕುರುಹು ಕೂಡ ಉಳಿಯದಂತೆ ಭಂಡಾಸುರನ ರಾಜಧಾನಿ ಶೂನ್ಯಕ ನಗರವನ್ನು ಸಂಪೂರ್ಣ ಭಸ್ಮ ಮಾಡುವಳು.
ಕಾಮ ಸಂಜೀವನೌಷಧಿ:
ತನ್ನ ಎಲ್ಲ ಬಾಂಧವರ ಸರ್ವ ನಾಶದೊಂದಿಗೆ ಕೇವಲ ಭಂಡಾಸುರ ಮಾತ್ರ ಒಂಟಿಯಾಗುಳಿಯುತ್ತಾನೆ. ಕಟ್ಟ ಕಡೆಗೆ ಪಾಶುಪತಾಸ್ತ್ರವನ್ನು ಭಂಡದೈತ್ಯನ ಮೇಲೆ ಆವಿರ್ಭಾವಗೊಳಿಸಿ ಅವನನ್ನೂ ಶ್ರೀಲಲಿತೆ ಭಸ್ಮ ಮಾಡುವಳು. ಯಾವ ಪರಶಿವನ ಕಾಮದಹನದ ಭಸ್ಮದಿಂದ ಭಂಡಾಸುರ ಜನ್ಮ ತಳೆದಿದ್ದನೋ ಕೊನೆಯಲ್ಲಿ ಮತ್ತದೇ ಪಶುಪತಿಯ ಪಾಶುಪತಾಸ್ತ್ರದಿಂದ ದಗ್ಧನಾಗಿ ಪುನರಪಿ ಭಸ್ಮೀಭೂತನಾಗುವಂತಾಯಿತು. ಶ್ರೀಲಲಿತಾ ದೇವಿಯ ಮಹಾದಿಗ್ವಿಜಯಕ್ಕೆ ತ್ರಿಮೂರ್ತಿಗಳ ಸಹಿತ ಸಮಸ್ತ ದೇವತಾವರ್ಗ ಆಕೆಯನ್ನು ಸ್ತುತಿಗೈಯ್ಯುವರು. ಜೊತೆಗೆ ಪರಶಿವ ನೇತ್ರಾಗ್ನಿಯಿಂದ ಭಸ್ಮನಾದ ಮನ್ಮಥನನ ಸಂಜೀವಿನಿಗೆ ಪ್ರಾರ್ಥಿಸುತ್ತಾರೆ. ಪ್ರಸನ್ನಳಾದ ಶ್ರೀ ಲಲಿತೆ ಕಾಮ ಸಂಜೀವಿನಿಯನ್ನು ಅನಗ್ರಹಿಸಿ ಆತನ ಪುನರ್ಜನ್ಮಕ್ಕೆ ಕಾರಣಳಾಗುತ್ತಾಳೆ. ಈ ಪ್ರಕಾರದಲ್ಲಿ ಹರನೇತ್ರಾಗ್ನಿ ಸಂದಿಗ್ಧ ಕಾಮ ಸಂಜೀವನೌಷಧಿ ಅಂದರೆ, ಹರನ ನೇತ್ರಾಗ್ನಿಯಿಂದ ದಗ್ಧನಾಗಿದ್ದ ಕಾಮದೇವನಿಗೆ ಶ್ರೀ ಲಲಿತಾ ತ್ರಿಪುರಸುಂದರಿ ಸಂಜೀವಿನಿ ಔಷಧ ಆದಳು!.
ಶ್ರೀ ಲಲಿತೆಯ ಕೃಪೆಯಿಂದ ನಿಮ್ಮ ಬದುಕಿನಲ್ಲಿ ಸುಟ್ಟಿದ್ದು ಮತ್ತೆ ಸಜೀವವಾಗಲಿ. ಶುಭಗಳೆಲ್ಲ ಚಿಗುರುವಂತಾಗಲಿ. 12 ದಿನಗಳ ಈ ಆಖ್ಯಾನ ಎಲ್ಲರ ಬದುಕಿಗೆ ಸುಖ ಸಮೃದ್ಧಿಯ ಸಂಜೀವಿನಿಯಾಗಲಿ. ಆಕೆಯ ಕೃಪಾ ಕಟಾಕ್ಷ ಏನೇನು ಬೇಕೋ ಅದನ್ನು ಅನುಗ್ರಹಿಸುವ ಅಷ್ಟಸಿದ್ಧಿ ಪ್ರದಾಯಕವಾಗಲಿ ಎಂದು ಶ್ರೀಗಳು ಮಂಗಳಮಯ ಆಶೀರ್ವಾದ ದಯಪಾಲಿಸಿದರು.
ಸಂಚಾರಕ್ಕೆ ಚಾಲನೆ:
ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಶ್ರೀಮಠದ ಪ್ರತಿ ಶಿಷ್ಯಭಕ್ತರ ಮನೆಗೆ ಬಿಜಯಂಗೈಯ್ದು ಪೂಜೆ ಸ್ವೀಕರಿಸಲಿರುವ ಸುವರ್ಣಪಾದುಕಾ ಸಂಚಾರಕ್ಕೆ ವಿಶೇಷ ರೀತಿಯಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಶಿಷ್ಯಹಿತಂ ಪ್ರಮುಖ ವೈ.ವಿ. ಕೃಷ್ಣಮೂರ್ತಿ, ಆಚಾರವಿಚಾರ ಗಜಾನನ ಭಟ್ಟರು, ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಉಪಾಧ್ಯಕ್ಷ ಶಾಂತಾರಾಮ ಹಿರೇಮನೆ, ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಪ್ರಧಾನ ರಮೇಶ ಹೆಗಡೆ ಗುಂಡೂಮನೆ ಇತರರಿದ್ದರು.