ಕಾನಹೊಸಹಳ್ಳಿ: ಜಂಗಮ ಜಾತಿ ಆರ್ಥಿಕವಾಗಿ ಹಿಂದುಳಿದಿದೆ ಎಂದು ಗುರುತಿಸಲು ಜಾತಿ ಕಾಲಂನಲ್ಲಿ ಹೆಸರಿಲ್ಲ. ಸಂಘಟಿತ ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯಬೇಕಿದೆ ಎಂದು ಸಾಹಿತಿ ಎನ್.ಎಂ.ರವಿಕುಮಾರ್ ಹೇಳಿದರು.
ಕಾನಹೊಸಹಳ್ಳಿ ಗಾಣಿಗ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಡಿಮೆ ಜನಸಂಖ್ಯೆ ಇರುವ ಜಾತಿಗಳು ಪ್ರಮಾಣ ಪತ್ರ ಪಡೆಯುತ್ತಿವೆ. ಆದರೆ, ಬಡತನದಲ್ಲಿರುವ ಜಂಗಮ ಸಮುದಾಯಕ್ಕೆ ಪ್ರಮಾಣಪತ್ರ ದೊರೆಯುತ್ತಿಲ್ಲ. ಆರ್ಥಿಕವಾಗಿ ಹಿಂದುಳಿದಿರುವುದರಿಂದ ಜಂಗಮ ಹೆಸರನ್ನು ಸರ್ಕಾರ ಜಾತಿ ಕಾಲಂನಲ್ಲಿ ಸೇರಿಸಲಿ. ಮೀಸಲಾತಿ ಕಸಿಯುವ ಭಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸಮುದಾಯದ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ ಎನ್ನುವುದು ದುರ್ದೈವದ ಸಂಗತಿ ಎಂದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್ ಮಾತನಾಡಿ, ಜಂಗಮ ಜಾತಿ ಪ್ರಮಾಣ ಪತ್ರ ಪಡೆಯಲು ಕಾನೂನು ಹೋರಾಟದ ಜತೆಗೆ ನಮ್ಮ ಹಕ್ಕುಗಳಿಗಾಗಿ ಜಿಲ್ಲಾದ್ಯಂತ ಹೋರಾಡುವುದು ಅನಿವಾರ್ಯ. ಅಭಿವೃದ್ಧಿಯಿಂದ ವಂಚಿತವಾದ ಸಮುದಾಯಕ್ಕೆ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಂದಾಲ್ ಡಿಜಿಎಂ ಕೆ.ಎಂ.ಕೇದಾರಸ್ವಾಮಿ, ಡಿವೈಎಸ್‌ಪಿ ಸಂತೋಷ್‌ಕುಮಾರ್, ನಿವೃತ್ತ ಪಿಎಸ್‌ಐ ನಾಗರಾಜ, ಡಾ.ಅಭಿಷೇಕ್ ಅವರನ್ನು ಸನ್ಮಾನಿಸಿ, ಹೆಚ್ಚು ಅಂಕಪಡೆದ ಸಮುದಾಯದ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕೊಟ್ಟೂರು ಮಹಲ್ ಮಠದ ಕ್ರಿಯಾಮೂರ್ತಿ ಶಂಕರ ಸ್ವಾಮೀಜಿ, ಜಂಗಮ ಸಮಾಜ ಸಂಸ್ಥೆ ಜಿಲ್ಲಾಧ್ಯಕ್ಷ ಕಾಶಿನಾಥಯ್ಯ, ತಾಲೂಕು ಅಧ್ಯಕ್ಷ ಎಚ್.ಎಂ.ಗಂಗಾಧರ ಸ್ವಾಮಿಜಿ, ಉಪಾಧ್ಯಕ್ಷ ಎಂ.ಒ.ಮಂಜುನಾಥ, ಪಿಎಸ್ಸೆಸ್ಸೆನ್ ಅಧ್ಯಕ್ಷ ಇಮಡಾಪುರ ವೀರೇಶಯ್ಯ, ಜಿಂದಾಲ್ ಕಂಪನಿ ಡಿಜಿಎಂ ಕೆ.ಎಂ.ಕೇದಾರಸ್ವಾಮಿ, ಡಿವೈಎಸ್‌ಪಿ ಸಂತೋಷ್‌ಕುಮಾರ್, ನಿವೃತ್ತ ಪಿಎಸ್‌ಐ ನಾಗರಾಜ, ಪಪಂ ಸದಸ್ಯ ಕೆ.ಎಚ್.ಎಂ.ಸಚಿನ್‌ಕಮಾರ್, ಗ್ರಾಪಂ ಸದಸ್ಯೆ ಕೆ.ಎಂ.ಮಂಜಕ್ಕ, ಸಂಸ್ಥೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಲ್ಮಠ, ಮುಖಂಡರಾದ ಪ್ರಭಯ್ಯಸ್ವಾಮಿ, ಎ.ಎಂ.ವಾಗೀಶ್‌ಮೂರ್ತಿ, ಬಣವಿಕಲ್ಲು ಎ.ಎಂ.ವೀರಭದ್ರಸ್ವಾಮಿ, ಪತ್ರಕರ್ತ ಎ.ಎಂ.ಸೋಮಶೇಖರ ಆರಾಧ್ಯ, ಎಚ್.ಎಂ.ಮನೋಜ್, ಶಿಕ್ಷಕ ಕೆ.ಎಚ್.ಎಂ.ಸೋಮಶೇಖರಯ್ಯ ಇದ್ದರು.