ರಾಣೆಬೆನ್ನೂರ: ತಾಲೂಕಿನ ರೈತರಿಗೆ ಖಾಸಗಿ ವಿಮಾ ಕಂಪನಿಯವರು ಕೂಡಲೇ ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ಹೆಡಿಯಾಲ ಗ್ರಾಮದ ಬಳಿ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಕಳೆದ ಬಾರಿ ಸರ್ಕಾರ ಬರಪೀಡಿತ ಜಿಲ್ಲೆ ಎಂದು ೋಷಣೆ ವಾಡಿದ ಮೇಲೆ ಬೆಳೆವಿಮೆ ವಾಡಿಸಿದ ಎಲ್ಲ ರೈತರ ಖಾತೆಗೆ ವಿಮಾ ಕಂಪನಿಯವರು ಶೇ. 25ರಷ್ಟು ಪರಿಹಾರ ಹಾಕಿದ್ದರು. ಬಾಕಿಯಿರುವ ಶೇ. 75ರಷ್ಟು ಪರಿಹಾರ ಕೊಡುವುದಾಗಿ ತಿಳಿಸಿದ್ದರು. ಆದರೀಗ ಬಾಕಿ ಹಣ ನೀಡುವಂತೆ ಕೇಳಿದರೆ, ಇಲ್ಲಸಲ್ಲದ ನೆಪಹೇಳಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಸರ್ಕಾರ ಕೂಡಲೇ ವಿಮಾ ಕಂಪನಿಯವರಿಗೆ ಸೂಚಿಸಿ ರೈತರಿಗೆ ಪರಿಹಾರ ಒದಗಿಸಬೇಕು. ಸಮಸ್ಯೆಯನ್ನು ತುರ್ತು ಇತ್ಯರ್ಥ ಪಡಿಸದಿದ್ದರೆ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.
ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಸುರೇಶ ಮಡ್ಲೂರ, ಲಕ್ಷ್ಮಣ ಚೌಟಿ, ಸುರೇಶ ಚಪ್ಪರದಹಳ್ಳಿ, ಶಿವಕುವಾರ ಜ್ಯೋತಿ, ಹೇಮಪ್ಪ ವಾರೇರ, ಮಹೇಶಪ್ಪ ವಾಸಣಗಿ, ಈರಪ್ಪ ಗಂಗಣ್ಣನವರ, ಬಸಪ್ಪ ಹೊಳಲವರ, ನಾಗಪ್ಪ ಅರಳಿ, ಬಸನಗೌಡ ಪಾಟೀಲ, ಮಹೇಶಪ್ಪ ಮಳಿಯಪ್ಪನವರ, ವಿರುಪಾಕ್ಷಪ್ಪ ಅರಳಿ, ಶಂಭು ವಾಸಣಗಿ ಮತ್ತಿತರರು ಪಾಲ್ಗೊಂಡಿದ್ದರು.