ಜಿಲ್ಲೆ

ಕೈಗಾರಿಕಾ ಉದ್ದೇಶಕ್ಕೆ ಸಂಸ್ಕರಿಸಿದ ನೀರು ಸರಬರಾಜು! ಕಾವೇರಿ ನೀರು ಪೂರೈಕೆ ಸ್ಥಗಿತಕ್ಕೆ ಜಲಮಂಡಳಿ ನಿರ್ಧಾರ

ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ಕಾವೇರಿ ನೀರು ಪೂರೈಕೆ ಹೊರೆಯನ್ನು ತಗ್ಗಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದ್ದು, ಕೈಗಾರಿಕಾ ಕೇಂದ್ರಗಳಿಗೆ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲು ನಿರ್ಧರಿಸಿದೆ.

ರಾಜಧಾನಿಯಲ್ಲಿ 10.37 ಲಕ್ಷ ನೀರಿನ ಸಂಪರ್ಕಗಳಿದ್ದು, ಜಲಮಂಡಳಿ ನಿತ್ಯ 1450 ಎಂಎಲ್​ಡಿ ನೀರು ಸರಬರಾಜು ಮಾಡುತ್ತಿದೆ. ಏಪ್ರಿಲ್​ನಿಂದ 110 ಗ್ರಾಮಗಳಿಗೆ ಹೊಸದಾಗಿ ನೀರು ಪೂರೈಕೆಯಾಗುವ ಸಾಧ್ಯತೆಯಿದೆ. ಬಳಿಕ ಜಲಮಂಡಳಿ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಕೈಗಾರಿಕಾ ಕೇಂದ್ರಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಮುಂದಾಗಿದೆ.

ನಗರದಲ್ಲಿ ನಿತ್ಯ 1440 ಎಂಎಲ್​ಡಿಯಷ್ಟು ತ್ಯಾಜ್ಯ ನೀರು ಸಂಗ್ರಹವಾಗುತ್ತದೆ. ಇದರ ಸಂಸ್ಕರಣೆಗಾಗಿ ನಗರದ ವಿವಿಧ ಭಾಗಗಳಲ್ಲಿ ಜಲಮಂಡಳಿ 33 ತ್ಯಾಜ್ಯನಿರು ಸಂಸ್ಕರಣಾ ಟಕಗಳನ್ನು ಸ್ಥಾಪಿಸಿದೆ. ಇದರಿಂದ ನಿತ್ಯ 1200 ಎಂಎಲ್​ಡಿ ಸಂಸ್ಕರಿತ ನೀರು ಸಂಗ್ರಹವಾಗುತ್ತದೆ. ಸಂಸ್ಕರಿಸಿದ ನೀರನ್ನು ಟ್ಯಾಂಕರ್​ ಮೂಲಕ ಪೂರೈಸಲಾಗುತ್ತದೆ. ಒಂದು ಟ್ಯಾಂಕರ್​ ಸಂಸ್ಕರಿಸಿದ ನೀರಿಗೆ 360 ರೂ. ದರವಿದೆ.

ಪ್ರಸ್ತುತ ಅಂತರ್ಜಲ ಕುಸಿತದಿಂದ ಈಗಾಗಲೇ ಸಾಕಷ್ಟು ಬೋರ್​ವೆಲ್​ಗಳು ಬತ್ತಿ ಹೋಗಿವೆ. ಹೀಗಾಗಿ ಮಾರ್ಚ್​ನಲ್ಲಿ ಕುಡಿಯವ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚಲಿದೆ. ಸದ್ಯ ನೀರಿನ ಅಭಾವವಿರುವ ಪ್ರದೇಶಗಳ ನಿವಾಸಿಗಳು ಟ್ಯಾಂಕರ್​ ನೀರಿನ ಮೊರೆ ಹೋಗುತ್ತಿದ್ದಾರೆ.

ನಿಯಮ ಮೀರಿದರೆ ಕ್ರಮ

ಕಾಮಗಾರಿಗಳಿಗೆ ಸಂಸ್ಕರಿಸಿದ ನೀರನ್ನೇ ಬಳಕೆ ಮಾಡಬೇಕೆಂಬ ನಿಯಮವನ್ನು ಕೆಲ ಗುತ್ತಿಗೆದಾರರು ಪಾಲಿಸುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ಟ್ಯಾಂಕರ್​ ಮೂಲಕ ಬೋರ್​ವೆಲ್​ ಹಾಗೂ ಕೆರೆ ನೀರನ್ನೇ ತರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೆ, ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಮಗಾರಿಗಳಿಗೆ ಸಂಸ್ಕರಿಸಿದ ನೀರನ್ನು ಬಳಸುವುದರಿಂದ ನೀರು ಪೋಲಾಗುವುದನ್ನು ನಿಯಂತ್ರಿಸಬಹುದಾಗಿದೆ.

ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಬೇಕು

ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಗಾಲಿ ಮತ್ತು ಅಚ್ಚು ಕಾರ್ಖಾನೆ, ಕೆಲ ಐಟಿ ಕಂಪೆನಿ, ಖಾಸಗಿ ಹೋಟೆಲ್​ನಲ್ಲಿ ನಿರ್ವಹಣೆಗಾಗಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡಲಾಗುತ್ತಿದೆ. ನಗರದಲ್ಲಿ ವಿವಿಧ ಭಾಗಗಳಲ್ಲಿ ಸಾಕಷ್ಟು ಕೈಗಾರಿಕಾ ಕೇಂದ್ರಗಳಿದ್ದು, ಅಧಿಕ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡುತ್ತವೆ. ನೀರಿನ ಕೊರತೆ ಹೆಚ್ಚುತ್ತಿರುವುದರಿಂದ, ಕೈಗಾರಿಕಾ ಕೇಂದ್ರಗಳಲ್ಲದೆ, ಸರ್ಕಾರಿ ಕಚೇರಿಗಳು, ಐಟಿ ಕಂಪೆನಿಗಳು, ಹೋಟೆಲ್​ಗಳು, ವಿವಿಧ ಕಾಮಗಾರಿ ಸಂದರ್ಭದಲ್ಲಿ ಸಾಧ್ಯವಾದಷ್ಟು ಸಂಸ್ಕರಿಸಿದ ನೀರನ್ನು ಬಳಸಬೇಕು.

ಪ್ರತಿಯೊಬ್ಬರೂ ನೀರಿನ ಮಿತಬಳಕೆಗೆ ಆದ್ಯತೆ ನೀಡಬೇಕು. ಇದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ. ಕೈಗಾರಿಕಾ ಉದ್ದೇಶಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸಲು ಕ್ರಮ ವಹಿಸಲಾಗುತ್ತದೆ. ಕೈಗಾರಿಕಾ ಕೇಂದ್ರಗಳಲ್ಲಿ ಅವಶ್ಯಕತೆಯಿರುವ ಕುಡಿಯುವ ನೀರಿಗೆ ಕಾವೇರಿ ನೀರನ್ನು ಸರಬರಾಜು ಮಾಡುತ್ತೇವೆ.

- ಡಾ.ರಾಮ್​ ಪ್ರಸಾತ್​ ಮನೋಹರ್​, ಅಧ್ಯಕ್ಷ, ಜಲಮಂಡಳಿ