ಜಿಲ್ಲೆ

110 ಹಳ್ಳಿಗಳಿಗೆ ಶ್ರೀಘ್ರವೇ ಕಾವೇರಿ ನೀರು; 2019ರಲ್ಲಿ ಆರಂಭವಾಗಿದ್ದ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ

ಬೆಂಗಳೂರು: ಕಳೆದ ಒಂದು ದಶಕದಿಂದ ಕಾವೇರಿ ನೀರಿಗಾಗಿ ಚಾತಪಯಂತೆ ಕಾದು ಕುಳಿತಿದ್ದ ಬೆಂಗಳೂರು ಹೊರವಲಯದ ನಿವಾಸಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಬಿಬಿಎಂಪಿ ವ್ಯಾಪ್ತಿಗೆ 2007ರಲ್ಲಿ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಪರಿಶೀಲನೆ ಕೆಲಸ ಮಾತ್ರ ಬಾಕಿ ಇವೆ.

ನೀರು ಪೂರೈಸಲು ಜಲಮಂಡಳಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸದ್ಯದಲ್ಲೇ ಮಹತ್ವದ ಯೋಜನೆಗೆ ಸರ್ಕಾರದಿಂದ ಹಸಿರು ನಿಶಾನೆ ಸಿಗಲಿದೆ. ಹೊರವಲಯದ ಹಳ್ಳಿಗಳಿಗೆ ಜೂನ್​ ಅಂತ್ಯದೊಳಗೆ ಕಾವೇರಿ ನೀರು ಪೂರೈಸುವುದಾಗಿ ಜಲಮಂಡಳಿ ಭರವಸೆ ನೀಡಿತ್ತು. ಆದರೆ, ಕಾಮಗಾರಿ ವಿಳಂಬ ಹಾಗೂ ತಾಂತ್ರಿಕ ಸಮಸ್ಯೆಯಿಂದ ನಿರೀತ ಸಮಯದಲ್ಲಿ ಯೋಜನೆ ಉದ್ಘಾಟಿಸಲು ಸಾಧ್ಯವಾಗಿರಲಿಲ್ಲ.

ತ್ವರಿತವಾಗಿ ಯೋಜನೆ ಉದ್ಘಾಟಿಸುವ ನಿಟ್ಟಿನಲ್ಲಿ ಜೂನ್​ ಬಳಿಕ ಅಂತಿಮ ಹಂತದ ಕಾಮಗಾರಿ ಕೆಲಸ ವೇಗ ಪಡೆದುಕೊಂಡಿತ್ತು. ಆಗಸ್ಟ್​ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿತ್ತು. ಜತೆಗೆ 110 ಹಳ್ಳಿಗಳಿಗೆ ಅಳವಡಿಸಿರುವ ಕೊಳವೆಗಳನ್ನು ಹಂತ ಹಂತವಾಗಿ ಪರೀಸಲಾಗಿತ್ತು. ಈ ಯೋಜನೆಯಡಿ 110 ಹಳ್ಳಿಗಳಿಗೆ ನಿತ್ಯ 775 ಎಂಎಲ್​ಡಿ ನೀರು ಸರಬರಾಜಾಗಲಿದ್ದಉ, ಒಟ್ಟು 5 ಲ ಸಂಪರ್ಕ ನೀಡಲು ಜಲಮಂಡಳಿ ಅಭಿಯಾನ ಕೈಗೊಂಡಿದೆ.

ನಗರಕ್ಕೆ 2225 ಎಂಎಲ್​ಡಿ ನೀರು

ಸದ್ಯ ನಗರಕ್ಕೆ ಕಾವೇರಿಯಿಂದ ನಿತ್ಯ 1,450 ಎಂಎಲ್​ಡಿ ನೀರು ಪೂರೈಕೆಯಾಗುತ್ತಿದ್ದು, 5ನೇ ಹಂತದಡಿ 775 ಎಂಎಲ್​ಡಿ ಸೇರ್ಪಡೆಯಾಗಲಿದೆ. ಇದರಿಂದ ಒಟ್ಟು 2,225 ಎಂಎಲ್​ಡಿ ನೀರು ನಗರಕ್ಕೆ ಪ್ರತಿನಿತ್ಯ ಸಿಗಲಿದೆ. ಮೊದಲ ಹಂತದಲ್ಲಿ 100&200 ಎಂಎಲ್​ಡಿ ನೀರು ಹರಿಸುವ ಗುರಿ ಹೊಂದಿದ್ದು, ನಂತರದಲ್ಲಿ ಹಂತಗಳಲ್ಲಿ ನೀರು ಪೂರೈಕೆ ಪ್ರಮಾಣ ಹೆಚ್ಚಿಸಲಾಗುತ್ತದೆ.

ಜೈಕಾದಿಂದ ಆರ್ಥಿಕ ಸಹಕಾರ

2014ರಲ್ಲಿ ಅಂದಿನ ಕಾಂಗ್ರೆಸ್​ ಸರ್ಕಾರ ಯೋಜನೆಗೆ ಅನುಮೋದನೆ ನೀಡಿತು. ಬಳಿಕ ಜಪಾನ್​ ಅಂತಾರಾಷ್ಟ್ರೀಯ ಸಹಕಾರ ಬ್ಯಾಂಕ್​&ಏಜೆನ್ಸಿ (ಜೈಕಾ) ಯಿಂದ ಅನುದಾನ ಪಡೆಯಲಾಯಿತು. ಅಂತಿಮವಾಗಿ ಯೋಜನಾ ವೆಚ್ಚ ಶೇ.84 ಭರಿಸಲು ಜೈಕಾ ಮುಂದಾಯಿತು. 2017ರಲ್ಲಿ 5ನೇ ಹಂತದ ಯೋಜನೆಗೆ 5,550 ಕೋಟಿ ರೂ. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಬಳಿಕ "ಜೈಕಾ'ದಿಂದ 4,661 ಕೋಟಿ ರೂ. ಸಾಲ ಪಡೆಯಲಾಯಿತು. ರಾಜ್ಯ ಸರಕಾರ ಮತ್ತು ಜಲಮಂಡಳಿ ತಲಾ 444.50 ಕೋಟಿ ರೂ. ಮೊತ್ತವನ್ನು ಭರಿಸಿವೆ.

ಡಿಸಿಎಂ ಪರಿಶೀಲನೆ ಇಂದು

ರಾಜಧಾನಿಯ ಸುಮಾರು 50 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಹಂತದ ಯೋಜನೆ ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ ಸೋಮವಾರ (ಸೆ.23) ಯೋಜನೆಯ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಕೆಂಗೇರಿಯಲ್ಲಿ ಬೃಹತ್​ ಕೊಳವೆ ಮಾರ್ಗದ ಕಾಮಗಾರಿ ಪರಿಶೀಲನೆ, ಹಾರೋಹಳ್ಳಿಯ 5ನೇ ಹಂತದ ಜಲರೇಚಕ ಯಂತ್ರಾಗಾರ ವೀಕ್ಷಣೆ, ತೊರೆಕಾಡನಹಳ್ಳಿಯಲ್ಲಿ ಜಲರೇಚಕ ಯಂತ್ರಾಗಾರ ವೀಕ್ಷಣೆ ಮಾಡಲಿದ್ದಾರೆ. ಪರಿಶೀಲನೆ ನಂತರ ಯೋಜನೆಯ ಉದ್ಘಾಟನೆ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ.