ಜಿಲ್ಲೆ

110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜಿಗೆ ಬೆಂಗಳೂರು ಜಲಮಂಡಳಿ ಸಿದ್ದತೆ

ಬೆಂಗಳೂರು: ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದ್ದು, ನೀರು ಸರಬರಾಜು ಮಾಡುವ ಸಿದ್ದತೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ಕಾವೇರಿ 5ನೇ ಹಂತದ ಕಾಮಗಾರಿಯನ್ನು ಬುಧವಾರ ಹಾರೋಹಳ್ಳಿ ಬಳಿ ಪರಿಶೀಲಿಸಿ, 5ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ ಲಭ್ಯವಾಗುವ ಹೆಚ್ಚುವರಿ 750 ಎಂಎಲ್​ಡಿ ನೀರನ್ನು ಸಮರ್ಪಕವಾಗಿ ಬಳಕೆಯಾಗಬೇಕಿದೆ. ಈ ನಿಟ್ಟಿನಲ್ಲಿ 110 ಗ್ರಾಮಗಳಲ್ಲಿ ಎಲ್ಲರೂ ಕಾವೇರಿ ನೀರಿನ ಸಂಪರ್ಕ ಪಡೆಯಲು ಮಂಡಳಿಯ ಅಧಿಕಾರಿಗಳು ಪೋತ್ಸಾಹಿಸಬೇಕು ಎಂದು ಸೂಚಿಸಿದರು.

ಕಾವೇರಿ 5 ನೇ ಹಂತದ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಇನ್ನು ಕೆಲವೇ ವಾರಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ನೀರು ಸರಬರಾಜು ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ನೀರಿನ ಸಮರ್ಪಕ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸುವುದು ಹಾಗೂ ಹೊಸ ಸಂಪರ್ಕಗಳನ್ನು ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕಾಗಿದೆ ಎಂದರು.

ಅನಧಿಕೃತ ಸಂಪರ್ಕಗಳನ್ನು ಪತ್ತೆ ಹಚ್ಚಿ:

110 ಗ್ರಾಮಗಳಲ್ಲಿ ಕೆಲವೆಡೆ ಅನಧಿಕೃತವಾಗಿ ಸಂಪರ್ಕಗಳನ್ನು ನೀಡಿರುವ ಬಗ್ಗೆ ದೂರುಗಳು ಬಂದಿವೆ. ಇವುಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಇವುಗಳನ್ನು ಸಕ್ರಮಗೊಳಿಸಿ ಜಲಮಂಡಳಿಗೆ ಆದಾಯ ಬರುವಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮರ್ಪಕವಾಗಿ ಹೊಸ ಸಂಪರ್ಕಗಳನ್ನು ನೊಂದಾಯಿಸುವ ಮೂಲಕ ನೀರಿನ ಸದ್ಬಳಕೆ ಆಗುತ್ತದೆ. ಇದರಿಂದ ಮಂಡಳಿಗೆ ಅಗತ್ಯ ಆದಾಯ ದೊರೆಯಲಿದ್ದು, ಸಾಲದ ಮರುಪಾವತಿಗೆ ಸಹಾಯವಾಗಲಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಜನರ ಮನೆಬಾಗಿಲಿಗೆ ತೆರಳಿ ನೀರಿನ ಸಂಪರ್ಕ ತಗೆದುಕೊಳ್ಳುವ ನಿಟ್ಟಿನಲ್ಲಿ ಪೋತ್ಸಾಹಿಸಬೇಕು. ಹೆಚ್ಚಿನ ಜನರು ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವಂತೆ ಕ್ರಮವಹಿಸಬೇಕು ಎಂದರು.