ಬೆಂಗಳೂರು: ಮಳೆಗಾಲದಲ್ಲಿ ಮಳೆ ನೀರು ಒಳಚರಂಡಿಗಳಿಗೆ ಸೇರ್ಪಡೆ ಆಗದಂತೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿ, ಮಳೆ ನೀರು ಒಳಚರಂಡಿಗೆ ಸೇರ್ಪಡೆ ಆಗುವ ಪ್ರದೇಶಗಳನ್ನು ಗುರುತಿಸುವ ಕಾರ್ಯ ಮೊದಲು ಆಗಬೇಕು. ಆ ಪ್ರದೇಶಗಳಲ್ಲಿ ಮಳೆ ನೀರು ಒಳಚರಂಡಿಗೆ ಸೇರ್ಪಡೆ ಆಗುವ ಮೂಲಕ ತೊಂದರೆ ಅಗದೇ ಇರುವಂತೆ ಕೈಗೊಳ್ಳಬೇಕಾದ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ, ಕಾಮಗಾರಿಗಳನ್ನು ಕೈಗೊಳ್ಳಲು ಕ್ರೀಯಾ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ನೀರನ್ನು ಸ್ಟಾರ್ಮ್ ವಾಟರ್ ಡ್ರೈನ್ನಲ್ಲಿ ಹರಿಯಬಿಡಬೇಕು. ಆದರೆ ಕೆಲವರು ಅನಧಿಕೃತವಾಗಿ ಮಳೆ ನೀರನ್ನು ಒಳಚರಂಡಿ ಕೊಳವೆ ಮಾರ್ಗಗಳಿಗೆ ಹರಿಯಬಿಡುತ್ತಾರೆ. ಬೆಂಗಳೂರು ನಗರದಾದ್ಯಂತ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಬೇಕು. ಹಾಗೂ ಅನಧಿಕೃತವಾಗಿ ನೀರು ಹರಿಯಬಿಡುತ್ತಿರುವುದನ್ನು ನಿಯಂತ್ರಿಸುವುದರ ಜತೆಗೆ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮಳೆಯ ಪ್ರಮಾಣ ಹೆಚ್ಚಾದ ಸಂಧರ್ಭದಲ್ಲಿ ಒತ್ತಡದಿಂದ ಕೆಲವು ಕಡೆಗಳಲ್ಲಿ ಮ್ಯಾನ್ ಹೋಲ್ ಕವರ್ ಗಳು ತೆರೆದುಕೊಳ್ಳುತ್ತವೆ. ಇದರಿಂದ ಪಾದಚಾರಿಗಳು ಹಾಗೂ ಚಲಿಸುತ್ತಿರುವ ವಾಹನಗಳಿಗೆ ಅನಾನುಕೂಲವಾಗುತ್ತದೆ. ಇದನ್ನ ತಡೆಯುವ ನಿಟ್ಟಿನಲ್ಲಿ ಒತ್ತಡ ಹೆಚ್ಚಾಗಬಹುದಾದ ಮ್ಯಾನ್ ಹೋಲ್‌ಗಳನ್ನು ಗುರುತಿಸಿ, ಅವುಗಳ ಬದಲಿಗೆ ಪ್ರೆಶರ್ ಮ್ಯಾನ್ ಹೋಲ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮಳೆ ನೀರು ಹರಿದು ಹೋಗುವಂತೆ ಮಾಡಲು ಕೆಲವು ಕಡೆಗಳಲ್ಲಿ ಸಾರ್ವಜನಿಕರು ಮ್ಯಾನ್‌ಹೋಲ್‌ಗಳ ಕವರ್‌ಗಳನ್ನ ತಗೆದುಬಿಡುತ್ತಾರೆ. ಇದರಿಂದ ಮಳೆ ನೀರು ಒಳಚರಂಡಿ ಕೊಳವೆ ಮಾರ್ಗಕ್ಕೆ ಪ್ರವೇಶ ಪಡೆದು ಒಳಚರಂಡಿ ಮಾರ್ಗದ ಮೇಲೆ ಒತ್ತಡ ಹೆಚ್ಚಿಸುತ್ತದೆ. ಅಲ್ಲದೇ, ಮ್ಯಾನ್‌ಹೋಲ್‌ಗಳ ಕವರ್ ಗಳನ್ನು ತಗೆಯುವುದರಿಂದ ಅವುಗಳ ಮಾಹಿತಿ ಇಲ್ಲದೇ ಮ್ಯಾನ್‌ಹೋಲ್‌ಗಳಲ್ಲಿ ಪಾದಚಾರಿಗಳು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಳೆ ನೀರು ಆವರಿಸುವದರಿಂದ ಮ್ಯಾನ್‌ಹೋಲ್‌ಗಳು ಕಾಣದೇ ವಾಹನಗಳು ಸಿಲುಕುವ ಸಾಧ್ಯತೆ ಇರುತ್ತದೆ. ಹಾಗೆಯೇ, ಮನೆಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆಯ ಮೂಲಕ ಸಂಗ್ರಹವಾಗುವ ನೀರನ್ನು ಇಂಗು ಗುಂಡಿಗಳ ಮೂಲಕ ಇಂಗುವ ವ್ಯವಸ್ಥೆ ಮಾಡಬೇಕು. ಇದನ್ನು ನೇರವಾಗಿ ಒಳಚರಂಡಿ ಕೊಳವೆ ಮಾರ್ಗಕ್ಕೆ ಬಿಡಬಾರದು. ಈ ರೀತಿ ಮಾಡುವುದರಿಂದ ಒಳಚರಂಡಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸಾರ್ವಜನಿಕರು ಈ ಎರಡೂ ಅಂಶಗಳ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.