ಜಿಲ್ಲೆ

ಹಬ್ಬದಂದು 'ನೀರಾ'ತಂಕವಾಗದಂತೆ ಕ್ರಮ: ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷರ ತಾಕೀತು

ಬೆಂಗಳೂರು: ಯುಗಾದಿ ಹಾಗೂ ರಂಜಾನ್​ ಹಬ್ಬ ವೇಳೆ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಮಂಡಳಿಯ ಹಿರಿಯ ಅಧಿಕಾರಿಗಳಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಹಬ್ಬದ ಸಂದರ್ಭದಲ್ಲಿ ನಾಗರಿಕರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಳಿ ಪದ್ಧತಿಯಲ್ಲಿ ತುರ್ತು ಕಾರ್ಯಗಳಿಗೆ ಲಭ್ಯವಿರಬೇಕು ಎಂದು ತಾಕೀತು ಮಾಡಿದರು.

ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಈಗಾಗಲೇ ಸಿಂಟೆಕ್ಸ್​ ಟ್ಯಾಂಕ್​ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹಬ್ಬದ ದಿನಗಳಂದು ಈ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ನೀರು ಸರಬರಾಜು ಮಾಡಬೇಕು. ಒಂದು ಬಾರಿ ಟ್ಯಾಂಕ್​ ತುಂಬುವ ಕಡೆ ಎರಡು ಬಾರಿ ತುಂಬುವ ಕೆಲಸ ಮಾಡಬೇಕು. ರಜೆಯಿಲ್ಲದೆ ಕೆಲಸ ಮಾಡುವ ಮೂಲಕ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಮಂಡಳಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಾಲ್​ಮೆನ್​ಗಳು ನಿಭಾಯಿಸಿದ್ದಾರೆ. ಇದೇ ರೀತಿ ಶ್ರಮವಹಿಸುವ ಮೂಲಕ ಜನರು ನಿರಾತಂತವಾಗಿ ಹಬ್ಬವನ್ನು ಆಚರಿಸುವಂತೆ ಮಾಡಬೇಕು ಎಂದು ಸೂಚಿಸಿದರು.

ನೀರಿನ ಸೋರಿಕೆ ತಡೆ

ನೀರಿನ ಸೋರಿಕೆ ತಡೆಯುವ ನಿಟ್ಟಿನಲ್ಲಿ ತುರ್ತು ಕಾಮಗಾರಿ ನಡೆಸಿ ಬುಧವಾರ ಸಮಗ್ರ ವರದಿ ನೀಡಬೇಕು. ಈಗಾಗಲೇ ಜಲಮಂಡಳಿಯ ವತಿಯಿಂದ ಸಮಸ್ಯೆ ಇರುವಂತಹ ಪೈಪ್​ಲೈನ್​ಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಪೈಪ್​ಲೈನ್​ಗಳನ್ನು ಬದಲಾಯಿಸಲು ಸಾಧ್ಯವಿಲ್ಲದಷ್ಟು ಕಟ್ಟಡಗಳು ನಿರ್ಮಾಣವಾಗಿವೆ. ಇನ್ನು ಕೆಲವೆಡೆ ಪೈಪ್​ಗಳು ಹಳೆಯದಾಗಿದ್ದು, ಅವುಗಳನ್ನು ಬದಲಾಯಿಸಲು ಕಾಮಗಾರಿ ಕೈಗೊಳ್ಳಬೇಕಾಗಿದೆ. ಹಾಳಾಗಿರುವ ಪೈಪ್​ಲೈನ್​ಗಳಿಂದ ನೀರು ಸೋರಿಕೆ ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ರಾಮ್​ಪ್ರಸಾತ್​ ಮನೋಹರ್​ ಸೂಚಿಸಿದರು.

ಬೇಕೇ ಬೇಕು ನೀರು ಬೇಕು!

ನಗರದ ವಿವಿಧ ಭಾಗಗಳಲ್ಲಿ ಜನರು ಕಳೆದ ಎರಡು ತಿಂಗಳಿನಿಂದ ನೀರಿನ ಬವಣೆ ಎದುರಿಸುತ್ತಿದ್ದು, ಕೊಳವೆಬಾವಿಯನ್ನೇ ನಂಬಿಕೊಂಡಿದ್ದ ಹಲವು ಅಪಾರ್ಟ್​ಮೆಂಟ್​ಗಳಲ್ಲಿ ಹೆಚ್ಚಿನ ಬವಣೆ ಕಾಣಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಓಕಳಿಪುರದ ಖಾಸಗಿ ಅಪಾರ್ಟ್​ಮೆಂಟ್​ ಒಂದರ ನಿವಾಸಿಗಳು ಒಟ್ಟಾಗಿ ನೀರು ಪೂರೈಸುವಂತೆ ಘೋಷಣೆ ಕೂಗಿರುವ ಟನೆ ಸೋಮವಾರ ನಡೆದಿದೆ. ಜನರು 'ಬೇಕೆ ಬೇಕು, ನೀರು ಬೇಕು' ಎನ್ನುತ್ತ ಅಪಾರ್ಟ್​ಮೆಂಟ್​ ನಿರ್ವಹಣೆ ವಿರುದ್ಧ ಘೋಷಣೆ ಕೂಗುತ್ತಿರುವ ವೀಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.