ಜಿಲ್ಲೆ

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

ಸುಭಾಸ ಹೆಗಡೆ ಧೂಪದಹೊಂಡ

ಕಾರವಾರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟ ಮಾಡಲು ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡ ರೈತರ ಸಂಖ್ಯೆ ತೀರ ಕಡಿಮೆ ಇದೆ. ಹಾಗಾಗಿ ಆನ್​ಲೈನ್ ನೋಂದಣಿ ಮಾಡುವ ಕೊನೆಯ ದಿನಾಂಕವನ್ನು ಫೆ. 28 ರವರೆಗೆ ವಿಸ್ತರಿಸಲಾಗಿದೆ. ಡಿಸೆಂಬರ್ 31 ನೋಂದಣಿಗೆ ಕೊನೆಯ ದಿನ ಎಂದು ತಿಳಿಸಲಾಗಿತ್ತು.

ಇದುವರೆಗೆ 506 ಜನ ರೈತರು ಮಾತ್ರ ಬೆಂಬಲ ಬೆಲೆಯಲ್ಲಿ ಭತ್ತ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಹಳಿಯಾಳದಲ್ಲಿ 6 ರೈತರು 228.12 ಕ್ವಿಂಟಾಲ್, ಕುಮಟಾದಲ್ಲಿ 16 ರೈತರು 487.13 ಕ್ವಿಂಟಾಲ್, ಮುಂಡಗೋಡಿನಲ್ಲಿ 82 ರೈತರು 3140.61 ಕ್ವಿಂಟಾಲ್, ಶಿರಸಿಯಲ್ಲಿ 225 ರೈತರು 7912.65 ಕ್ವಿಂಟಾಲ್, ಜೊಯಿಡಾದಲ್ಲಿ 177 ರೈತರು 6659.35 ಕ್ವಿಂಟಾಲ್ ಭತ್ತ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನಷ್ಟು ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಕುಮಟಾ, ಮುಂಡಗೋಡ, ಜೊಯಿಡಾ, ಹಳಿಯಾಳ ತಾಲೂಕುಗಳಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಅಥವಾ ಅಕ್ಷರದಾಸೋಹ ಮಳಿಗೆಗಳಲ್ಲಿ , ಶಿರಸಿ ಬನವಾಸಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ ಖರೀದಿಗೆ ರೈತರ ನೊಂದಣಿ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ 22 ಗಿರಣಿ ಮಾಲೀಕರು ಭತ್ತವನ್ನು ಸಂಗ್ರಹಿಸಿ ಹಲ್ಲಿಂಗ್ ಮಾಡಿಕೊಡಲು ನೋಂದಣಿ ಮಾಡಿಕೊಂಡಿದ್ದಾರೆ. ಬಾಂಡ್ ನೀಡಿ ಕರಾರು ಪತ್ರ ಮಾಡಿಕೊಳ್ಳುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಸದ್ಯ ಶಿರಸಿ ಬನವಾಸಿಯಲ್ಲಿ ಮಾತ್ರ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಉಳಿದೆಡೆ.

ಎಷ್ಟು ಬೆಂಬಲ ಬೆಲೆ?: ಸರ್ಕಾರದಿಂದ ಈಗಾಗಲೇ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 1940 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ 1960 ರೂ. ದರ ನಿಗದಿಪಡಿಸಲಾಗಿದೆ. ಕೃಷಿ ಇಲಾಖೆ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಲ್ಲಿ ನೋಂದಣಿ ಮಾಡಿಕೊಂಡಿರುವ ರೈತರು ಮಾತ್ರ ಈ ಯೋಜನೆಯಲ್ಲಿ ನೊಂದಣಿ ಮಾಡಿಕೊಳ್ಳಲು ಅವಕಾಶವಿದೆ. ಸಂಬಂಧಿಸಿದ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಪ್ರತಿ ರೈತರಿಂದ 1 ಎಕರೆಗೆ 25 ಕ್ವಿಂಟಾಲ್​ನಂತೆ, ಗರಿಷ್ಠ 40 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.