ಬಾಗಲಕೋಟೆ: ಸರ್ಕಾರದ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಸಿಗಬೇಕಿದ್ದ ಹಾಲಿನ ಪುಡಿ ಪಾಕೆಟ್ಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಮಹಾರಾಷ್ಟ್ರಕ್ಕೆ ಸಾಗಿಸಲು ಮುಂದಾಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣ ಹಾಲಿನ ಪುಡಿ ಪಾಕೆಟ್ಗಳನ್ನು ವಶಪಡಿಸಿಕೊಂಡಿರುವ ಟನೆ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಶಾಲೆಗಳಿಗೆ ಹಾಲಿನ ಪುಡಿ ಪಾಕೆಟ್ಗಳನ್ನು ಸರಬರಾಜು ಮಾಡಲು ಸಬ್ ಲೀಜ್ ಪಡೆದುಕೊಂಡಿದ್ದ ಸಿದ್ದಪ್ಪ ಕಿತ್ತಲಿ ಎನ್ನುವ ವ್ಯಕ್ತಿಯೇ ಪ್ರಕರಣದ ಆರೋಪಿ. ತನ್ನ ಮನೆ ಎದುರು ಇರುವ ಶೆಡ್ನಲ್ಲಿ ಅಕ್ರಮವಾಗಿ ದಾಸ್ತಾನು ಸಂಗ್ರಹಿಸಿದ್ದ. ಅದನ್ನು ವಾಹನದಲ್ಲಿ ತುಂಬಿ ಮಹಾರಾಷ್ಟ್ರಕ್ಕೆ ಸಾಗಿಸಲು ಸಿದ್ಧತೆಮಾಡಿಕೊಂಡಿದ್ದ ವೇಳೆಯೇ ಖಚಿತ ಮಾಹಿತಿ ಮೇಲೆ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿ ಸಮೇತ ದಾಸ್ತಾನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ ಹಾಲಿನ ಪುಡಿ ಪಾಕೆಟ್ ಜೊತೆ ರಾಗಿ ಹಿಟ್ಟಿನ ಪಾಕೆಟ್ ಹಾಗೂ ಅಡುಗೆ ಎಣ್ಣೆ ಪಾಕೆಟ್ ಸಹ ಸಿಕ್ಕಿವೆ. 17.90 ಲಕ್ಷ ರೂ. ಮೌಲ್ಯದ ಒಟ್ಟು 4475 ಕೆಜಿ ಹಾಲಿನ ಪುಡಿ, 19550 ರೂ. ಮೌಲ್ಯದ 325 ಕೆಜಿ ರಾಗಿ ಹಿಟ್ಟು ಹಾಗೂ 4500 ರೂ.ಗಳ 50 ಕೆಜಿ ಅಡುಗೆ ಎಣ್ಣೆ ಪಾಕೇಟ್ ಗಳು ಸೇರಿ ಒಟ್ಟು 18.14 ಲಕ್ಷ ರೂ. ಮೌಲ್ಯದ ವಸ್ತುಗಳು ಹಾಗೂ ಒಂದು ಬೊಲೇರೋ ವಾಹನ ಜಪ್ತಿ ಮಾಡಿಕೊಂಡಿದ್ದು, ಆರೀಪಿ ಸಿದ್ದಪ್ಪ ಕಿತ್ತಲಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಹುನಗುಂದ ಹಾಗೂ ಬಾದಾಮಿ ತಾಲೂಕಿನ ಶಾಲೆಗಳಿಗೆ ಹಾಲಿನ ಪುಡಿ ಪಾಕೆಟ್ಗಳನ್ನು ಸರಬರಾಜು ಮಾಡುವ ಗುತ್ತಿಗೆಯನ್ನು ಮಹಾಲಿಂಗಪುರದ ಶ್ರೀಶೈಲ ಅಂಗಡಿ ಎನ್ನುವವರು ಪಡೆದುಕೊಂಡಿದ್ದಾರೆ. ಶ್ರೀಶೈಲ ಕಡೆಯಿಂದ ಸಿದ್ದಪ್ಪ ಕಿತ್ತಲಿ ಖಾಸಗಿಯಾಗಿ ಸಬ್ ಲೀಜ್ ಪಡೆದುಕೊಂಡಿದ್ದನು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಡಿಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ ಸಾಗಾಟವಾಗಲಿದ್ದ ಹಾಲಿನ ಪುಡಿ ಪಾಕೆಟ್ ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೊರ ಜಿಲ್ಲೆಗಳ ಹಾಲಿನ ಪುಡಿ ಪಾಕೆಟ್ : ಸಿದ್ದಪ್ಪ ಕಿತ್ತಲಿ ಶೆಡ್ ನಲ್ಲಿ ಸಂಗ್ರಹಿಸಿದ್ದ ಹಾಲಿನ ಪುಡಿ ಪಾಕೆಟ್ಗಳಲ್ಲಿ ಬರೀ ಬಾಗಲಕೋಟೆ ಜಿಲ್ಲೆ ಮಾತ್ರವಲ್ಲದೇ ಗದಗ, ಧಾರವಾಡ, ಉತ್ತರ ಕನ್ನಡ ಸೇರಿ ವಿವಿಧ ಜಿಲ್ಲೆಗಳ ಶಾಲೆಗಳಿಗೆ ಪೂರೈಕೆ ಆಗಬೇಕಿದ್ದ ಹಾಲಿನ ಪುಡಿ ಪಾಕೆಟ್ಗಳು ಇವೆ. ಇದರಿಂದ ಈ ಅಕ್ರಮ ದಂಧೆಯ ದೊಡ್ಡ ಜಾಲವೇ ಇದ್ದಂತಿದೆ. ಜೊತೆಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ದಾಸ್ತಾನು ಸಂಗ್ರಹ ಮಾಡಿದ್ದನ್ನು ನೋಡಿದರೆ ಇದರಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಶಾಮಿಲು ಆಗಿರುವ ಆಗಿರುವ ಸಾಧ್ಯತೆ ಇದೆ.
ಜೊತೆಗೆ ಇದೀಗ ಅಕ್ರಮ ಸಂಗ್ರಹ ಹಾಗೂ ಮಾರಾಟದ ಆರೋಪದ ಮೇಲೆ ಪೊಲೀಸ್ ವಶದಲ್ಲಿ ಇರುವ ಆರೋಪಿ ವಿರುದ್ಧ ಈ ಹಿಂದೆಯೂ ಬೆಳಗಾವಿ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇದೀಗ ತನಿಖೆ ಕೈಗೊಂಡಿದ್ದು, ಈ ಅಕ್ರಮ ದಂಧೆಯಲ್ಲಿ ಯಾರೆಲ್ಲ ಕೈಜೋಡಿಸಿದ್ದಾರೆ ಎನ್ನುವುದು ಬೆಳಕಿಗೆ ಬರುವ ಸಾಧ್ಯತೆ ಇದೆ.
ಸೂಳಿಕೇರಿ ಗ್ರಾಮದಲ್ಲಿ ಅಕ್ರಮವಾಗಿ ಹಾಲಿನ ಪುಡಿ ಪಾಕೆಟ್ ಸಂಗ್ರಹಿಸಿ ಮಹಾರಾಷ್ಟ್ರಕ್ಕೆ ಸಾಗಿಸುವ ಖಚಿತ ಮಾಹಿತಿ ಆಧರಿಸಿ ಸಿಇಎನ್ ಪೊಲೀಸರು ದಾಳಿ ನಡೆಸಿ 4.5 ಟನ್ ಹಾಲಿನ ಪುಡಿ ಪಾಕೆಟ್ಗಳನ್ನು ಜಪ್ತಿ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಇದರಲ್ಲಿ ಯಾರೆಲ್ಲ ಭಾಗಿ ಆಗಿದ್ದಾರೆ ಎಂದು ಪತ್ತೆ ಮಾಡಿ ಆರೋಪಿತರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ.ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ.