ಮೈಸೂರು: ಯುವಪೀಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಹೇಳಿದರು.
ಸಂವಹನ ಪ್ರಕಾಶಕರು, ಕನ್ನಡ ಸಾಹಿತ್ಯ ಕಲಾಕೂಟ ವತಿಯಿಂದ ಸರಸ್ವತಿಪುರಂ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಜ್ಞಾನ ಸಾಹಿತಿ ಎಸ್.ರಾಮಪ್ರಸಾದ್ ಅವರ ‘ಮುಪ್ಪಿಗೆ ನೆನಪೇ ಸಂಜೀವಿನಿ’ ಪುಸ್ತಕ ಹಾಗೂ ಸಂವಹನ ಪ್ರಕಾಶನದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯು ಪುಸ್ತಕಗಳನ್ನು ಖರೀದಿಸುವ ಮತ್ತು ಓದುವ ಸಂಸ್ಕೃತಿ ಹೆಚ್ಚಾಗುವಂತೆ ಮಾಡಬೇಕು. ಪುಸ್ತಕ ಹೊರತಂದು ಓದಿಲ್ಲ ಅಂದರೆ ಅದರ ಸತ್ವ ಗೊತ್ತಾಗುವುದಿಲ್ಲ. ಇಂದು ಟಿವಿ, ಅಂತರ್ಜಾಲ ಮೊದಲಾದ ಕಾರಣಗಳಿಂದಾಗಿ ಪುಸ್ತಕಗಳನ್ನು ತೆರೆದು ಓದುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ ಎಂದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ ಪುಸ್ತಕ ಬಿಡುಗಡೆ ಮಾಡಿದರು. ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವುದು ಹಿರಿಯರ ಕರ್ತವ್ಯ. ಹೊಸ ಹೊಸ ಪುಸ್ತಕಗಳನ್ನು ಓದಿದರೆ ಪ್ರಕಾಶಕರು ಮತ್ತು ಕೃತಿಕಾರರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಕನ್ನಡ ಸಾಹಿತ್ಯ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಲೇಖಕ ಎಸ್.ರಾಮಪ್ರಸಾದ್, ಪ್ರಾಧ್ಯಾಪಕ ಡಾ.ಎಸ್.ಎ.ಮೋಹನ ಕೃಷ್ಣ ಮತ್ತಿತರರಿದ್ದರು.