ಪಾಂಡವಪುರ ಪಟ್ಟಣದ ಹಾರೋಹಳ್ಳಿ ಎಪಿಎಂಸಿ ಆವರಣದಲ್ಲಿ ತೆರೆದಿರುವ ರಾಗಿ, ಕೊಬ್ಬರಿ ಖರೀದಿ ಕೇಂದ್ರವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಮಹಾಮಂಡಳದ ವಿಭಾಗೀಯ ವ್ಯವಸ್ಥಾಪಕ ವೆಂಕಟೇಶ್ ನಾಯಕ್, ಎಪಿಎಂಸಿ ಕಾರ್ಯದರ್ಶಿ ಪಂಕಜಾ, ಆಹಾರ ಶಿರಸ್ತೇದಾರ್ ರಮಾ, ಖರೀದಿ ಕೇಂದ್ರದ ಅಧಿಕಾರಿ ಲಿಂಗರಾಜು ಇತರರು ಇದ್ದರು. 
ಜಿಲ್ಲೆ

ಬೆಂಬಲ ಬೆಲೆಯಡಿ ವರ್ಷಪೂರ್ತಿ ಖರೀದಿಸಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಪಾಂಡವಪುರ : ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ವರ್ಷಪೂರ್ತಿ ತೆರೆಯಬೇಕು ಎಂಬುದು ರೈತಸಂಘದ ಒತ್ತಾಯವಾಗಿದ್ದು, ಈ ಬಗ್ಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಹಾರೋಹಳ್ಳಿ ಬಳಿಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ತೆರೆದಿರುವ ರಾಗಿ ಮತ್ತು ಉಂಡೆ ಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ಬೆಳೆ ಕಟಾವು ಮುಗಿದು ಎರಡ್ಮೂರು ತಿಂಗಳ ಬಳಿಕ ಖರೀದಿ ಕೇಂದ್ರ ತೆರೆದರೆ ರೈತರಿಗೆ ಯಾವುದೇ ಪ್ರಯೋಜವಾಗುವುದಿಲ್ಲ. ಕಟಾವು ಆಗುತ್ತಿದ್ದಂತೆ ದಲ್ಲಾಳಿಗಳು ರೈತರಿಂದ ಬೆಳೆ ಖರೀದಿಸಿ ಬೆಂಬಲ ಬೆಲೆ ಘೋಷಣೆಯಾಗುತ್ತಿದ್ದಂತೆ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ. ರೈತರಿಗೆ ಅನುಕೂಲವಾಗಬೇಕಾದರೆ ವರ್ಷವಿಡೀ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಆಮದು ಮತ್ತು ರಫ್ತು ನೀತಿಯಿಂದಾಗಿ ಕೊಬ್ಬರಿ ಬೆಲೆ ಕುಸಿತ ಕಂಡಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬರಗಾಲ, ಸೂಕ್ತ ಮಾರುಕಟ್ಟೆ ಇಲ್ಲದಿರುವುದು, ಮಧ್ಯವರ್ತಿಗಳ ಹಾವಳಿ ಈ ರೀತಿಯ ಹಲವು ಸಮಸ್ಯೆಗಳಿಂದ ರೈತ ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಂತೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇದರಲ್ಲಿ ರೈತರು ಹವಾಮಾನಕ್ಕೆ ಅನುಗುಣವಾಗಿ, ಮಣ್ಣಿನ ಫಲವತ್ತತೆ, ಮಾರುಕಟ್ಟೆ ನಿರ್ವಹಣೆ, ನೀರಿನ ಲಭ್ಯತೆಗಳ ಆಧಾರದ ಮೇಲೆ ಯಾವ್ಯಾವ ಬೆಳೆ ಬೆಳೆಯಬೇಕು ಎಂಬುದರ ಮಾಹಿತಿ ನೀಡಲಾಗುವುದು ಎಂದರು.

ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಈ ವರ್ಷದಿಂದ ಜಾರಿಗೆ ತರಲಾಗಿದೆ. ಇದನ್ನು ಮೀರಿ ದಲ್ಲಾಳಿಗಳು ಖರೀದಿ ಕೇಂದ್ರದಲ್ಲಿ ಭಾಗಿದಾರರಾದರೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರಿಕೆ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಕೆ.ಎಸ್.ಮೋಹನ್ ಮಾತನಾಡಿ, ಬರಗಾಲದ ಪರಿಸ್ಥಿತಿಯಲ್ಲಿ ರೈತರು ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಏ.30ರವರೆಗೆ ಖರೀದಿ ಕೇಂದ್ರ ತೆರೆದಿರುತ್ತದೆ. ರೈತರು ಊಹಾಪೋಹಗಳಿಗೆ ಕಿವಿಗೊಡದೆ ತಾಳ್ಮೆಯಿಂದ ಬೆಳೆಗಳನ್ನು ನೋಂದಣಿ ಮಾಡಿಸಿಕೊಂಡು ಬೆಳೆಗಳನ್ನು ಮಾರಾಟ ಮಾಡಬೇಕು. ಕಳೆದ ಬಾರಿ 5 ಲಕ್ಷ ಟನ್ ಖರೀದಿಗೆ ಅನುಮತಿ ನೀಡಲಾಗಿತ್ತು. ಈ ವರ್ಷ 6.25 ಲಕ್ಷ ಟನ್ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ರೈತರಿಗೆ ತೊಂದರೆಯಾಗದಂತೆ ರಾಗಿ, ಕೊಬ್ಬರಿ ಖರೀದಿಸಲಾಗುವುದು ಎಂದರು.

ಮಹಾಮಂಡಳದ ವಿಭಾಗೀಯ ವ್ಯವಸ್ಥಾಪಕ ವೆಂಕಟೇಶ್ ನಾಯಕ್, ಎಪಿಎಂಸಿ ಕಾರ್ಯದರ್ಶಿ ಪಂಕಜಾ, ಆಹಾರ ಶಿರಸ್ತೇದಾರ್ ರಮಾ, ಖರೀದಿ ಕೇಂದ್ರದ ಅಧಿಕಾರಿ ಲಿಂಗರಾಜು ಇತರರು ಇದ್ದರು.