ಜಿಲ್ಲೆ

ಬೆಣ್ಣೆ ಹಣ್ಣು ಗಿಡಕ್ಕೆ ಶುರುವಾಯಿತು ಹುಳುಗಳ ಕಾಟ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಬಟರ್‌ಫ್ರೂಟ್ ಬೇಸಾಯಕ್ಕೆ ಈಗ ಎಲೆಗಳನ್ನು ತಿನ್ನುವ ಹುಳುಗಳ ಕಾಟ ಶುರುವಾಗಿದೆ. ಸದ್ಯಕ್ಕೆ ಈ ಹುಳುಗಳ ಹಾವಳಿ ಗರ್ವಾಲೆ ಭಾಗದಲ್ಲಿ ವರದಿಯಾಗಿದ್ದು, ಬೇರೆ ಕಡೆ ಇದ್ದರೂ ಗಮನಿಸಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕಂಬಳಿ ಹುಳುಗಳ ಮಾದರಿಯ ಹುಳುಗಳು ಒಂದು ಗಿಡಕ್ಕೆ ದಾಳಿ ಇಟ್ಟರೆ ಆ ಗಿಡದಲ್ಲಿ ಇರುವ ಎಲ್ಲಾ ಎಲೆಗಳನ್ನು ಸಂಪೂರ್ಣ ಭಕ್ಷಿಸಿದ ನಂತರವೇ ವಿಶ್ರಾಂತಿ ಪಡೆಯುವುದರಿಂದ ಈ ಬಗ್ಗೆ ಬಟರ್‌ಫ್ರೂಟ್ ಬೆಳೆಗಾರರಲ್ಲಿ ಆತಂಕ ಶುರುವಾಗಿದೆ.

ಸಾಮಾನ್ಯವಾಗಿ ಬೆಣ್ಣೆ ಹಣ್ಣು ಗಿಡಗಳಲ್ಲಿ ಎಲೆ ಕಪ್ಪಾಗುವುದು, ಕಾಯಿ ಮೇಲೆ ಕಜ್ಜಿಗಳ ರೀತಿಯಲ್ಲಿ ಕಲೆ ಮೂಡುವುದು, ಬೇರು ತಿನ್ನುವ ಹುಳುಗಳಿಂದಾಗಿ ಗಿಡಗಳು ಸಾಯುವುದು ಮತ್ತಿತರ ಸಮಸ್ಯೆಗಳು ಎದುರಾಗುತ್ತದೆ. ತಜ್ಞರು ಈಗಾಗಲೇ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದಾರೆ. ನಾಟಿ ಸಮಯದಲ್ಲಿ ಮತ್ತು ನಂತರದ ದಿನಗಳಲ್ಲಿ ಒಂದಿಷ್ಟು ಮುನ್ನೆಚ್ಚರಿಕೆ ವಹಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಸೂಕ್ತ ಔಷಧೋಪಚಾರಗಳ ಮುಖಾಂತರವೂ ಪರಿಹಾರ ಕಂಡುಕೊಳ್ಳಬಹುದು. ಹಾಗಾಗಿ ಬಟರ್‌ಫ್ರೂಟ್ ಬೆಳೆಗಾರರು ಸಮಸ್ಯೆಗಳು ಎದುರಾದಾಗ ಅಷ್ಟಾಗಿ ಚಿಂತೆ ಮಾಡುವುದಿಲ್ಲ. ಆದರೆ ಈಗ ಕಂಡುಬAದಿರುವ ಹುಳುಗಳ ಬಾಧೆ ಒಂದು ರೀತಿಯಲ್ಲಿ ವಿಶೇಷವಾಗಿದೆ.

ಹೆಚ್ಚು ಮಳೆ ಬೀಳುವ ಗರ್ವಾಲೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬಟರ್‌ಫ್ರೂಟ್ ಬೆಳೆಗಾರರಿಗೆ ಹೊಸದೊಂದು ಸವಾಲು ಎದುರಾಗಿದೆ. ಈ ವ್ಯಾಪ್ತಿಯಲ್ಲಿ ಬೆಣ್ಣೆ ಹಣ್ಣು ಗಿಡಗಳ ಮೇಲೆ ದಾಳಿ ಇಡುವ ಕಂಬಳಿ ಹುಳು ಮಾದರಿ ಹುಳುಗಳು ಎಲೆಗಳನ್ನು ಒಂದೂ ಬಿಡದೆ ಸಂಪೂರ್ಣ ತಿಂದು ಬೆಣ್ಣೆಹಣ್ಣಿನ ಗಿಡದ ರೆಂಬೆ ಕೊಂಬೆಗಳನ್ನು ಬೆತ್ತಲು ಮಾಡಿ ಬಿಡುತ್ತವೆ. ಎಲೆಗಳೆಲ್ಲಾ ಹುಳುಗಳ ಹೊಟ್ಟೆ ಸೇರಿ ಕೇವಲ ಕಡ್ಡಿಗಳು ಮಾತ್ರ ಗಿಡದಲ್ಲಿ ಕಾಣಿಸಿಕೊಳ್ಳುತ್ತದೆ.

ಈ ಭಾಗದಲ್ಲಿ ಮಾತ್ರ ಸದ್ಯಕ್ಕೆ ಇಂಥ ಹುಳುಗಳ ಹಾವಳಿಯನ್ನು ಸ್ಥಳೀಯ ಪ್ರಗತಿಪರ ಬೆಳೆಗಾರರು ಗುರುತಿಸಿದ್ದಾರೆ. ಕೊಡಗಿನ ಕಾಫಿ ತೋಟಗಳಲ್ಲಿ ನೆರಳು ಮರವಾಗಿದ್ದ ಕುಳಿರುಮಾವು ಮರಗಳಿಗೆ ಮೊದಲೆಲ್ಲಾ ಈ ಮಾದರಿಯ ಹುಳುಗಳು ಬಾಧಿಸುತ್ತಿದ್ದವು. ಆದರೆ ಈಗ ಕಾಫಿ ತೋಟಗಳಲ್ಲಿ ಈ ಕುಳಿರುಮಾವು ಮರಗಳನ್ನು ಕಾಣುವುದು ಅಪರೂಪವಾಗಿದೆ. ಹಣದಾಸೆಗೆ ಈ ಮರವನ್ನು ಕಡಿದು ನಾಶ ಮಾಡಲಾಗಿದೆ. ಈಗ ಅದೇ ಕುಟುಂಬಕ್ಕೆ ಸೇರಿದ ಬೆಣ್ಣೆ ಹಣ್ಣು ಗಿಡಗಳ ಎಲೆಗಳನ್ನು ತಿಂದು ಈ ಹುಳುಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿರಬಹುದು ಎನ್ನುತ್ತಾರೆ ಇಲ್ಲಿಯ ಬೆಳೆಗಾರರು. ಕುಳಿರು ಮಾವು ಗಿಡದ ತೊಗಟೆಯನ್ನು ಗಂಧದ ಕಟ್ಟಿ ತಯಾರಿಕೆಯಲ್ಲಿ ಕಚ್ಛಾ ವಸ್ತುವಾಗಿ ಬಳಸಲಾಗುತ್ತಿತ್ತು.

ಈ ಮೊದಲು ಜಿಲ್ಲೆಯಾದ್ಯಂತ ಕಾಫಿ ತೋಟಗಳಲ್ಲಿ ವ್ಯಾಪಕವಾಗಿದ್ದ ಕುಳಿರುಮಾವು ಗಿಡಗಳು ಕಾಫಿ ಗಿಡಗಳಿಗೆ ಉತ್ತಮ ನೆರಳು ಕೊಡುತ್ತಿದ್ದವು. ಆದರೆ ಕೊಡಗಿನ ಎಲ್ಲಾ ಭಾಗಗಳಲ್ಲೂ ಈ ಮರ ಅಪರೂಪವಾಗಿದೆ. ಹಾಗಾಗಿ ಜಿಲ್ಲೆಯ ಇತರೆಡೆಗಲ್ಲೂ ಬೆಣ್ಣೆ ಹಣ್ಣು ಗಿಡಗಳಿಗೆ ಈ ಹುಳುವಿನ ಹಾವಳಿ ಶುರುವಾಗಿರಬಹುದು. ಆದರೆ ನಿರಂತರ ಮಳೆ ಇರುವ ಕಾರಣ ಬೆಳೆಗಾರರಿಗೆ ಗುರುತಿಸಲು ಆಗಿರಲಿಕ್ಕಿಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಎಲ್ಲಾ ಕಡೆಗಳಲ್ಲೂ ಈ ಹುಳುವಿನ ಬಾಧೆ ಇದ್ದರೆ ಮುಂದಿನ ಹಂಗಾಮಿಗೆ ಬಟರ್‌ಫ್ರೂಟ್ ಇಳುವರಿ ಕಡಿಮೆ ಆಗುವ ಸಾಧ್ಯತೆ ಇದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.

ಮತ್ತೊಂದು ಕಡೆ ಈ ಹುಳುವಿನ ಬಾಧೆಯಿಂದ ಅಂಥ ಸಮಸ್ಯೆ ಆಗಲಿಕ್ಕಿಲ್ಲ ಎನ್ನುವ ಅಭಿಪ್ರಾಯವೂ ಕೆಲವು ಬೆಳೆಗಾರರಿಂದ ವ್ಯಕ್ತ ಆಗುತ್ತಿದೆ. ಹುಳುಗಳು ಎಲೆಗಳನ್ನು ತಿಂದಿರುವ ಜಾಗದಲ್ಲಿ ಮತ್ತೆ ಎಲೆಗಳು ಚಿಗುರಬಹುದು. ನಂತರ ಮುಂದಿನ ಹಂಗಾಮಿನಲ್ಲಿ ಹೆಚ್ಚು ಹೂವು ಅರಳಲು ದಾರಿ ಸುಗಮವಾಗಿ ಹೆಚ್ಚಿನ ಫಸಲು ಬರಲೂ ಬಹುದು ಎನ್ನಲಾಗುತ್ತಿದೆ. ಆದರೆ ಇದೇ ಪ್ರಥಮ ಬಾರಿಗೆ ಈ ಹುಳುಗಳು ಬಟರ್‌ಫ್ರೂಟ್ ಗಿಡಗಳ ಮೇಲೆ ದಾಳಿ ಮಾಡಿರುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಕಾದು ನೋಡುವ ಅಗತ್ಯವೂ ಇದೆಯಾದರೂ ಬೆಳೆಗಾರರು ಆತಂಕಕ್ಕೆ ಒಳಗಾಗಿರುವುದಂತೂ ಸುಳ್ಳಲ್ಲ.

ಬಟರ್‌ಫ್ರೂಟ್ ಎಂದು ಜನಸಾಮಾನ್ಯರಲ್ಲಿ ಪರಿಚಯ ಆಗಿರುವ ಅವಾಕಡೋದ ಕೆಲವು ತಳಿಗಳು ವರ್ಷದಲ್ಲಿ 2 ಫಸಲು ಕೊಡುತ್ತವೆ. ಮತ್ತೆ ಕೆಲವು ತಳಿಗಳು ಮಳೆಗಾಲದಲ್ಲಿ ಮಾತ್ರ ಗಿಡದ ತುಂಬಾ ಕಾಯಿ ಬಿಟ್ಟು ಗಮನ ಸೆಳೆಯುತ್ತವೆ. ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಣ್ಣೆಹಣ್ಣು ಮಾರುಕಟ್ಟೆಗೆ ಬರುವುದರಿಂದ ಬೇಡಿಕೆ ಅಷ್ಟಾಗಿ ಇರುವುದಿಲ್ಲ. 'ಫ್ರೀ ಕೊಟ್ಟರೂ ತೆಗೆದುಕೊಂಡು ಹೋಗುವವರಿಲ್ಲ' ಎಂದು ಗ್ರಾಮೀಣರು ಆಡಿಕೊಳ್ಳುವ ಮಟ್ಟಿಗೆ ಬಟರ್‌ಫ್ರೂಟ್ ಮಾರುಕಟ್ಟೆ ಕಳೆದುಕೊಂಡಿರುತ್ತದೆ. ವ್ಯಾಪಾರಿಗಳು ಅತ್ಯುತ್ತಮ ಗುಣಮಟ್ಟದ ಹಣ್ಣುಗಳನ್ನಷ್ಟೇ ಖರೀದಿಸುವ ಮನಸ್ಸು ಮಾಡುತ್ತಾರೆ. ಇವೆಲ್ಲವುಗಳ ನಡುವೆ ಬಟರ್‌ಫ್ರೂಟ್‌ಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಮಿಲ್ಕ್ಶೇಕ್ ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿಯೂ ಬಳಕೆಯಾಗುವ ಬೆಣ್ಣೆಹಣ್ಣನ್ನು ವ್ಯಾಪಾರಸ್ಥರು ತೋಟಗಳಿಗೆ ತೆರಳಿ ತಾವೇ ಕೊಯ್ಲು ಮಾಡಿ ತೆಗೆದುಕೊಂಡು ಹೋಗುವುದಿದೆ.

ಹಣ್ಣಿನ ಗಾತ್ರ, ಆಕಾರ, ತೂಕ, ಬಣ್ಣ ಹಾಗೂ ಸಿಪ್ಪೆಯ ಹೊಳಪಿನ ಆಧಾರದಲ್ಲಿ ಮೊದಲು ಗುಣಮಟ್ಟ ನಿರ್ಧರಿಸಲಾಗುತ್ತದೆ. ಕೆಲವು ತಳಿಗಳ ಬೆಣ್ಣೆ ಹಣ್ಣುಗಳನ್ನು 15 ದಿನಗಳಿಗಿಂತಲೂ ಹೆಚ್ಚು ಕಾಲ ಕಿತ್ತಿಟ್ಟರೂ ಹಾಳಾಗುವುದಿಲ್ಲ. ಬಟರ್‌ಫ್ರೂಟ್‌ಗಳು ಅವುಗಳ ತಳಿಗಳನ್ನು ಅವಲಂಬಿಸಿ ತಲಾ 300 ಗ್ರಾಂನಿAದ ಸುಮಾರು 1.5 ಕೆ.ಜಿ. ತನಕ ತೂಗುತ್ತವೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 2-3 ಹಣ್ಣು ಬರುವಂತಿದ್ದರೆ ಅವುಗಳಿಗೆ ಬೇಡಿಕೆ ಹೆಚ್ಚು. ಅವಾಕಡೋ ಹಣ್ಣಿನ ತಿರುಳು ಥೇಟ್ ಬೆಣ್ಣೆಯಂತೆ ಇರುವುದರಿಂದ ಇದನ್ನು ಬಟರ್‌ಫ್ರೂಟ್ ಎಂದು ಕರೆಯಲಾಗುತ್ತದೆ. ಬರೀ ಹಣ್ಣು ಸೇವಿಸಿದರೆ ಯಾವುದೇ ರುಚಿಯ ಅನುಭವ ಆಗುವುದಿಲ್ಲ. ಆದರೆ ಇದಕ್ಕೆ ಸಕ್ಕರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಸೇರಿಸಿದರೆ ವಿಶೇಷ ಸ್ವಾಧ ಸವಿಯಬಹುದು. ಬಟರ್‌ಫ್ರೂಟ್‌ನಲ್ಲಿ ಆರೋಗ್ಯಕ್ಕೆ ಪೂರಕ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಜನರು ಇಷ್ಟಪಟ್ಟು ಖರೀದಿಸುತ್ತಾರೆ. ಸಕ್ಕರೆ, ಜೇನು, ಅಥವಾ ಬೆಲ್ಲ ಬೆರೆಸಿ ತಿನ್ನುವುದು ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಬಟರ್‌ಫ್ರೂಟ್ ಮಿಲ್ಕ್ಶೇಕ್‌ಗೆ ಹೆಚ್ಚಿನ ಬೇಡಿಕೆ ಇದೆ. ಬ್ರೆಡ್ ಜತೆಗೆ ಜಾಮ್ ರೀತಿಯಲ್ಲೂ ಸೇವಿಸುವವರಿದ್ದಾರೆ.

ಬೆಣ್ಣೆ ಹಣ್ಣು ಗಿಡಗಳಿಗೆ ಸಂಕಷ್ಟ ಶುರುವಾಗಿದೆ. ಕೊಡಗಿನ ಕಾಫಿ ತೋಟಗಳಲ್ಲಿ ನೆರಳು ಮರವಾಗಿದ್ದ ಕುಳಿರುಮಾವು ಮರಗಳಿಗೆ ಭಾದಿಸುತಿದ್ದ ಕಂಬಳಿ ಹುಳು ಮಾರಿ ಹುಳಗಳು ಈವಾಗ ಬೆಣ್ಣೆ ಹಣ್ಣು ಗಿಡಗಳ ಎಲೆಗಳನ್ನು ಒಂದೂ ಬಿಡದಂತೆ ತಿಂದು ತೇಗುತ್ತಿವೆ. ಕಾಫಿ ತೋಟಗಳಲ್ಲಿರುವ ಕುಳಿರುಮಾವು ಮರಗಳನ್ನೆಲ್ಲ ಕಡಿದು ನಾಶ ಮಾಡಿರುವುದಕ್ಕೆ ಅದೇ ಕುಟುಂಬಕ್ಕೆ ಸೇರಿದ ಬೆಣ್ಣೆ ಹಣ್ಣು ಗಿಡಗಳ ಎಲೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಪ್ರಕೃತಿಯೇ ಹಾಗೆ, ಯಾವುದನ್ನೂ ಹಸಿದುಕೊಂಡು ಇರಲು ಬಿಡುವುದಿಲ್ಲ. ಮಾನವ ಚಾಪೆಯ ಕೆಳಗೆ ನುಣುಚಿದರೆ ಪ್ರಕೃತಿ ರಂಗೋಲಿ ಕೆಳಗೆ ನುಣುಚುತ್ತಿದೆ ಅಷ್ಟೇ.

ನಾಪಂಡ ಪೂಣಚ್ಚ, ಪ್ರಗತಿಪರ ಬೆಳೆಗಾರ, ಗರ್ವಾಲೆ

ಕಂಬಳಿ ಹುಳುಗಳು ಆ ಬಟರ್‌ಫ್ರೂಟ್ ಗಿಡಗಳಿಗೆ ದಾಳಿ ಇಟ್ಟಿವೆ. ಬೇರೆ ಒಂದೆರಡೂ ದೇಶಗಳಲ್ಲೂ ಇದು ಕಂಡು ಬಂದಿದೆ. ಕೆಲವೊಂದು ಅವಧಿಯಲ್ಲಿ ಮಾತ್ರ ಇವು ಕಾಣಿಸಿಕೊಳ್ಳುತ್ತವೆ. ಎಲ್ಲಾ ಕಡೆಗಳಲ್ಲಿ ಇವು ಇಲ್ಲ. ಅಷ್ಟೊಂದು ವೇಗವಾಗಿ ಹರಡುವ ಸಾಧ್ಯತೆಯೂ ಇಲ್ಲ. ಸ್ಪೆçà ಮಾಡಿದರೆ ಇವು ನಾಶ ಆಗುತ್ತವೆ. ಬೆಳೆಗಾರರು ಆತಂಕಪಡಬೇಕಾದ ಅಗತ್ಯವಿಲ್ಲ.

ಡಾ. ಬಿ.ಎಂ. ಮುರಳೀಧರ್, ಹಣ್ಣು ವಿಜ್ಞಾನಿ, ತೋಟಗಾರಿಕಾ ಬೆಳೆಗಳ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿ