ಹಲಗೂರು: ಶ್ರಾವಣ ಮಾಸದ ಮೊದಲ ಶನಿವಾರ ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಮುತ್ತತ್ತಿರಾಯನಿಗೆ 6ನೇ ವರ್ಷದ ಬ್ರಹ್ಮರಥೋತ್ಸವ ಅಂಗವಾಗಿ ಬೆಣ್ಣೆಯಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುತ್ತತ್ತಿ ಗ್ರಾಮದಲ್ಲಿ ವಿವಿಧ ಜಿಲ್ಲೆಗಳಲ್ಲಿ ಅಪಾರ ಭಕ್ತಾದಿಗಳನ್ನು ಒಳಗೊಂಡಿರುವ ಮುತ್ತತ್ತಿರಾಯನಿಗೆ ಶ್ರಾವಣ ಮಾಸದ ಮೊದಲ ಶನಿವಾರ ಆರನೇ ವರ್ಷದ ಬ್ರಹ್ಮರಥೋತ್ಸವ ಅಪಾರ ಭಕ್ತರೊಡನೆ ಅದ್ದೂರಿಯಾಗಿ ನಡೆಯಿತು. ಬೆಳಗಿನ ಜಾವ ಕಾವೇರಿ ನದಿಯಿಂದ ಕಾವೇರಿ ನದಿಯಿಂದ ಗಂಗೆ ತಂದು ದೇವರ ಮೂರ್ತಿಯನ್ನು ಶುಚಿಗೊಳಿಸಿ ಅಭಿಷೇಕ ನಡೆಸಲಾಯಿತು. ನಂತರ ಗಣಹೋಮ, ನವಗ್ರಹ ಹೋಮ, ಬೆಣ್ಣೆಯಿಂದ ಅಲಂಕಾರ ಮಾಡಿ ಪಾದಪೂಜೆ ನಡೆಸಿ ವಿವಿಧ ಪುಷ್ಪಗಳನ್ನು ಧರಿಸಿ ಮಹಾ ಮಂಗಳಾರತಿಯ ನಂತರ ಭಕ್ತಾದಿಗಳಿಗೆ ಪ್ರಸಾದ ನೀಡಲಾಯಿತು. ಬೆಳಗ್ಗೆಯಿಂದಲೇ ಹೆಚ್ಚು ಭಕ್ತರು ಬಂದು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ದೇವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥವನ್ನು ಅಲಂಕರಿಸಿ ಕಬ್ಬಾಳಮ್ಮನ ಮೆರವಣಿಗೆ ಸಾಗಿತು. ಹಲಗೂರು ಭದ್ರಕಾಳಿ ದೇವರ ಬಸಪ್ಪ ಪಾಲ್ಗೊಂಡಿತ್ತು. ಭಕ್ತರು ಶ್ರೀನಾಮ ಪಾದಕ್ಕೆ ಗೋವಿಂದ… ಗೋವಿಂದ… ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತಿ ಸಮರ್ಪಿಸಿದರು.
ಅರ್ಚಕರಾದ ರವಿ ಮಾತನಾಡಿ ಈ ಸನ್ನಿಧಿಯಲ್ಲಿ ಸುಮಾರು ಆರು ವರ್ಷಗಳಿಂದ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಶ್ರಾವಣ ಮಾಸದ ಮೊದಲ ಶನಿವಾರ ಪ್ರತಿವರ್ಷ ಪೂಜೆ ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ದೇವರಿಗೆ ಪೂಜೆ ಸಲ್ಲಿಸುವುದರಿಂದ ತಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಇದೆ ಎಂದರು.
ಹೆಚ್ಚು ಮಳೆಯಾಗಿ ಕಾವೇರಿ ನದಿಗೆ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ಹೆಚ್ಚು ನೀರು ಬಿಟ್ಟ ಹಿನ್ನೆಲೆಯಲ್ಲಿ ಭಕ್ತರ ಇಲ್ಲದೆ ಬಣಗುಡುತ್ತಿದ್ದ ಮುತ್ತತ್ತಿ ಸನ್ನಿಧಿ ಶ್ರಾವಣ ಮಾಸದಲ್ಲಿ ಅಪಾರ ಸಂಖ್ಯೆಯ ಭಕ್ತರಿಂದ ತುಂಬಿ ತುಳುಕುತ್ತಿತ್ತು.