ಜಿಲ್ಲೆ

ಕಾವು ಜಂಕ್ಷನ್‌ಗೆ ಬೇಕು ತಂಗುದಾಣ : ಜಾಗವಿಲ್ಲದ ನೆಪದಿಂದ ನಿರ್ಮಾಣವಾಗಿಲ್ಲ : ಪ್ರಯಾಣಿಕರಿಗೆ ಸಂಕಷ್ಟ

ಸೌಮ್ಯ ಆರ್

ಶಶಿ ಕುತ್ಯಾಳ ಈಶ್ವರಮಂಗಲ

ರಸ್ತೆ ಬದಿಯಲ್ಲಿ ಸದಾ ಪ್ರಯಾಣಿಕರು ನಿಂತು ವಾಹನಗಳಿಗಾಗಿ ಕಾಯುತ್ತಿರುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಜಂಕ್ಷನ್ ಬಳಿ ಮೂಲಸೌಕರ್ಯಗಳಲ್ಲೊಂದಾದ ಬಸ್ ಪ್ರಯಾಣಿಕರ ತಂಗುದಾಣದ ವ್ಯವಸ್ಥೆಯೇ ಇಲ್ಲ.

ಇಲ್ಲಿ ಈಶ್ವರಮಂಗಲ ಕಡೆಗೆ ಹೋಗುವ ಪ್ರಯಾಣಿಕರಿಗೆ ಮತ್ತು ಕಾವಿನಿಂದ ಪುತ್ತೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಪ್ರತ್ಯೇಕ ಎರಡು ಪ್ರಯಾಣಿಕರ ತಂಗುದಾಣಗಳ ಅಗತ್ಯವಿದ್ದರೂ ಈ ಪೈಕಿ ಒಂದೂ ಆಗುತ್ತಿಲ್ಲ. ಇದರಿಂದಾಗಿ ಇಲ್ಲಿ ವಾಹನಗಳಿಗಾಗಿ ಕಾಯುವ ಪ್ರಯಾಣಿಕರು ನರಕಯಾತನೆ ಪಡಬೇಕಾಗಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಈಶ್ವರಮಂಗಲ ಕಡೆಯಿಂದ ಸಂಪರ್ಕ ಕಲ್ಪಿಸುವ ಕಾವು ಜಂಕ್ಷನ್ ಬಳಿ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಪ್ರತ್ಯೇಕ ಎರಡು ಪ್ರಯಾಣಿಕರ ಬಸ್ ತಂಗುದಾಣದ ವ್ಯವಸ್ಥೆ ಅತಿ ಅಗತ್ಯ. ಆದರೆ ಜಾಗವಿಲ್ಲ ಎಂಬ ಕಾರಣದಿಂದ ಕೈಬಿಡಲಾಗಿದೆ. ಇದೀಗ ಕಾವು ಜಂಕ್ಷನ್ ಪಕ್ಕದಲ್ಲೇ ವಿಶಾಲ ರಿಕ್ಷಾ ತಂಗುದಾಣದ ವ್ಯವಸ್ಥೆ ಶಾಸಕರ ಮುತುವರ್ಜಿಯಲ್ಲಿ ಅಲ್ಲಿ ಆಗಿದೆ. ರಿಕ್ಷಾ ತಂಗುದಾಣ ನಿರ್ಮಾಣ ಮಾಡಲು ಜಾಗವಿದೆ ಎಂದಾದರೆ ಪ್ರಯಾಣಿಕರ ಬಸ್ ತಂಗುದಾಣ ನಿರ್ಮಾಣಕ್ಕೆ ಜಾಗ ಸಿಗುತ್ತಿಲ್ಲ ಯಾಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಕಾವು ಜಂಕ್ಷನ್ ಬಳಿಯಿದ್ದ ಬಸ್ ಪ್ರಯಾಣಿಕರ ತಂಗುದಾಣವನ್ನು ಕೆಲ ವರ್ಷಗಳ ಹಿಂದೆ ಈಶ್ವರಮಂಗಲ-ಪಳ್ಳತ್ತೂರು ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸುವ ಸಂದರ್ಭ ತೆರವುಗೊಳಿಸಲಾಗಿತ್ತು. ಮತ್ತೆ ನಿರ್ಮಾಣ ಮಾಡುವ ಬಗ್ಗೆ ಯಾರೂ ಆಸಕ್ತಿ ತೋರಿಲ್ಲ.

ಬೆಂಗಳೂರು, ಮೈಸೂರು, ಮಡಿಕೇರಿ, ಸುಳ್ಯ ಕಡೆಯಿಂದ ಹಾಗೂ ಮಂಗಳೂರು, ಪುತ್ತೂರು ಕಡೆಯಿಂದ ಬಸ್‌ಗಳಲ್ಲಿ ಬಂದು, ಈಶ್ವರಮಂಗಲ, ಸುಳ್ಯಪದವು, ಕರ್ನಾಟಕ-ಕೇರಳ ಗಡಿಪ್ರದೇಶವಾದ ಪಳ್ಳತ್ತೂರು, ಕರ್ನೂರು, ದೇಲಂಪಾಡಿ ಕಡೆಗೆ ಹೋಗುವ ಪ್ರಯಾಣಿಕರು ಬಸ್‌ಗಾಗಿ ಮತ್ತು ಇತರ ವಾಹನಗಳಿಗಾಗಿ ಕಾವು ಜಂಕ್ಷನ್ ಬಳಿ ಕಾಯಬೇಕಾಗುತ್ತದೆ. ಕಾವು ಕಡೆಯಿಯಿಂದ ದಿನನಿತ್ಯ ಪುತ್ತೂರಿಗೆ ತೆರಳುವ ಹಲವಾರು ಮಂದಿ ವಿದ್ಯಾರ್ಥಿಗಳಿದ್ದಾರೆ. ಈಶ್ವರಮಂಗಲದ ವಿದ್ಯಾಸಂಸ್ಥೆಗಳಲ್ಲಿ ಕೆಲಸ ಮಾಡುವ ಬಹಳಷ್ಟು ಮಂದಿ ಶಿಕ್ಷಕಿಯರು, ಹಲವಾರು ಮಂದಿ ವಿದ್ಯಾರ್ಥಿಗಳು, ಉದ್ಯೋಗ, ವ್ಯವಹಾರ ದೃಷ್ಟಿಯಿಂದ ದಿನನಿತ್ಯ ಪೇಟೆಗೆ ಹೋಗುವ ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ.

ಮಹಿಳೆಯರ ಅಳಲು

ತಂಗುದಾಣದ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯಲ್ಲೇ ಬಿಸಿಲು ಮಳೆಗೆ ನಿಂತು ವಾಹನಕ್ಕಾಗಿ ಕಾಯಬೇಕಾಗುತ್ತದೆ. ಪುರುಷರಾದರೆ ಪಕ್ಕದ ಅಂಗಡಿಗಳ ಬದಿಗೆ ಹೋಗಿ ನಿಲ್ಲುತ್ತಾರೆ. ಆದರೆ ನಮಗೆ ಜನಸೇರುತ್ತಿರುವ ಅಂಗಡಿ ಬದಿಗೆ ಹೋಗಿ ನಿಲ್ಲಲು ಮುಜುಗರವಾಗುತ್ತದೆ. ರಸ್ತೆ ಬದಿಯಲ್ಲಿ ನಿಲ್ಲಬೇಕಾಗಿರುವುದರಿಂದ ನಾವು ನರಕಯಾತನೆ ಪಡುತ್ತಿದ್ದೇವೆ. ಆದರೂ ನಮ್ಮ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ ಎನ್ನುವುದು ಇಲ್ಲಿ ದಿನಂಪ್ರತಿ ರಸ್ತೆ ಬದಿ ನಿಂತು ವಾಹನಗಳಿಗಾಗಿ ಕಾಯುವ ಮಹಿಳೆಯರ ಅಳಲು.

ಜನಪ್ರತಿನಿಧಿಗಳಿಗೆ ಆಸಕ್ತಿ ಇಲ್ಲ

ಕಾವು ಜಂಕ್ಷನ್ ಬಳಿ ಜಾಗ ಸಿಗುತ್ತಿದ್ದರೆ ಈ ಮೊದಲೇ ತಂಗುದಾಣ ನಿರ್ಮಿಸುತ್ತಿದ್ದೆವು. ಪಂಚಾಯಿತಿಯ 15ನೇ ಹಣಕಾಸು ಕ್ರಿಯಾಯೋಜನೆಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕಾಗಿ ಅನುದಾನ ಇಡುತ್ತೇವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರ ಒಮ್ಮತದ ಅಭಿಪ್ರಾಯ ಪಡೆದು ಬಸ್ ತಂಗುದಾಣ ನಿರ್ಮಿಸುವ ಪ್ರಯತ್ನ ಮಾಡುತ್ತೇವೆ ಎಂದು ಅರಿಯಡ್ಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎರಡು ವರ್ಷಗಳ ಹಿಂದೆಯೇ ಹೇಳಿಕೊಂಡಿದ್ದರು.

ಬಸ್ ತಂಗುದಾಣ ನಿರ್ಮಿಸಲು 2 ವರ್ಷದ ಹಿಂದೆ ಅನುದಾನ ಇರಿಸಿ ಜಾಗದ ಸರ್ವೇ ಕಾರ್ಯ ಮಾಡಿದ್ದೆವು. ಆದರೆ ಅದು ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗವೆಂಬುವುದು ದೃಢಪಟ್ಟ ಕಾರಣ ಕೈಬಿಡಬೇಕಾಯಿತು. ಪುತ್ತೂರು ಕಡೆಗೆ ಪ್ರಯಾಣಿಸುವ ಮಂದಿ ಬೇಡಿಕೆ ಸಲ್ಲಿಸಿದರೆ ಆ ಭಾಗದಲ್ಲಿ ತಂಗುದಾಣ ನಿರ್ಮಿಸಲು ಮುಂದಿನ ದಿನಗಳಲ್ಲಿ ಅನುದಾನ ಇರಿಸಲಾಗುವುದು. ಸಂತೋಷ್ ಮಣಿಯಾಣಿ ಕುತ್ಯಾಡಿ ಅರಿಯಡ್ಕ ಗ್ರಾ.ಪಂ. ಅಧ್ಯಕ್ಷ https://www.vijayavani.net/blocked-by-farmers-for-400-kv-work https://www.vijayavani.net/sdm-model-for-b-ed-educational-institutions