ಜಿಲ್ಲೆ

ಅಪರೂಪದ ಬ್ರಿಡಲ್ ಸ್ನೇಕ್ ರಕ್ಷಣೆ

Belagavi

ಬೆಳಗಾವಿ: ಪರ್ವತ ಪ್ರದೇಶಗಳಲ್ಲಿ ಮಾತ್ರ ಕಂಡು ಬರುವ ಅಪರೂಪದ ‘ವಧುವಿನ ಹಾವು’ (ಬ್ರಿಡಲ್ ಸ್ನೇಕ್) ಎಂದು ಕರೆಯಲ್ಪಡುವ ವಿಶಿಷ್ಟ ಪ್ರಕಾರದ ಹಾವೊಂದು ನಗರದ ಉದ್ಯಮಬಾಗ ಸ್ಟಾರ್ ಅಸೋಸಿಯೇಟೆಡ್ ಕಾರ್ಖಾನೆಯಲ್ಲಿ ಪತ್ತೆಯಾಗಿದೆ. ಉರಗ ತಜ್ಞರೊಬ್ಬರು ಈ ಹಾವನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಹಾವು ಕಾರ್ಖಾನೆಯ ಒಳಗಡೆ ಅವಿತಿರುವುದನ್ನು ಕಂಡ ಕಾರ್ಮಿಕರೊಬ್ಬರು ಉರಗ ತಜ್ಞನಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ, ಅಪರೂಪದ ಹಾವನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಹಾವು ಕಂಡು ಬಂದಿದೆ ಎನ್ನಲಾಗಿದೆ.

ವಿಶೇಷತೆ: ಈ ಹಾವು 14 ಇಂಚು ಉದ್ದವಿದ್ದು, ಸುಮಾರು 3 ವರ್ಷದ್ದಿರಬಹುದು ಎನ್ನಲಾಗಿದೆ. ಈ ಜಾತಿಯ ಹಾವು ಗರಿಷ್ಠ 21 ಇಂಚು ಉದ್ದ ಹೊಂದಿರುತ್ತದೆ. ಅಲ್ಲದೆ, ಕನಿಷ್ಠ 6 ಮೊಟ್ಟೆಯನ್ನು ಇಡುತ್ತದೆ. ಕಂದು ಬಣ್ಣದ ಹಾವಿನ ಮೇಲೆ ನಿಗದಿತ ದೂರದಲ್ಲಿ ಬಿಳಿ ಪಟ್ಟೆಯಿರುತ್ತದೆ. ಹೀಗಾಗಿ ಈ ಹಾವು ನೋಡಲೂ ಸುಂದರವಾಗಿರುತ್ತದೆ.

ದೇಶದಲ್ಲಿ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಒರಿಸ್ಸಾ ರಾಜ್ಯಗಳಲ್ಲಿ ಈ ಬಗೆಯ ಹಾವುಗಳು ಕಂಡುಬರುತ್ತವೆ. ಅಲ್ಲದೆ, ಮನೆಗಳಲ್ಲಿರುವ ಹಲ್ಲಿ ಅಥವಾ ಹಲ್ಲಿ ಜಾತಿಯ ಕ್ರಿಮಿ-ಕೀಟ ತಿನ್ನಲು ಈ ಭಾಗದ ಮನೆಗಳಿಗೆ ನುಗ್ಗುತ್ತವೆ. ಇದೇ ಮೊದಲ ಬಾರಿಗೆ ಈ ಹಾವು ಕರ್ನಾಟಕದಲ್ಲಿ ಕಂಡು ಬಂದಿದ್ದು, ಈ ಕುರಿತು ಅಧ್ಯಯನ ನಡೆಸಬೇಕಿದೆ ಎಂದು ಅಭಿಪ್ರಾಯಪಡುತ್ತಾರೆ ಉರಗಪ್ರೇಮಿ ಆನಂದ ಚಿಟ್ಟಿ.