ಜಿಲ್ಲೆ

ವ್ಯವಹಾರ ಚತುರತೆ ಮೆರೆದ ಚಿಣ್ಣರು!

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಮಕ್ಕಳಲ್ಲಿ ವ್ಯವಹಾರದ ಜ್ಞಾನ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಕ್ಕಳ ಸಂತೆ ಹಾಗೂ ಮೆಟ್ರಿಕ್ ಮೇಳ ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಸ್. ಹರ್ಲಾಪುರ ಹೇಳಿದರು.

ಸಮೀಪದ ಅಡರಕಟ್ಟಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದರು.

ಇದು ನಮ್ಮ ಪಠ್ಯಕ್ಕೆ ಹತ್ತಿರವಾಗಿದೆ. ಸುಲಭವಾಗಿ ಅರ್ಥವಾಗುತ್ತದೆ. ಶಾಲೆಯಲ್ಲಿ ಕಲಿಯುವ ಗಣಿತದ ಜತೆಗೆ ಮಕ್ಕಳಿಗೆ ಬದುಕು ನಡೆಸಲು ಅಗತ್ಯವಾದ ವ್ಯವಹಾರಿಕ ಗಣಿತ ತಿಳಿಯಲು ಇಂಥ ಮೇಳಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಶಾಲೆಯ 1-7ನೇ ವರ್ಗದಲ್ಲಿ ಕಲಿಯುತ್ತಿರುವ 200 ಮಕ್ಕಳ ಪೈಕಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂತೆಯಲ್ಲಿ ಪಾಲ್ಗೊಂಡು ವ್ಯಾಪಾರ ವಹಿವಾಟು ನಡೆಸಿದರು. ತರಕಾರಿ, ಕಿರಾಣಿ, ಆಟಿಕೆ, ಸಿದ್ಧಉಡುಪುಗಳನ್ನು ಸಂತೆಯಲ್ಲಿ ವ್ಯಾಪಾರಸ್ಥರು ಮಾರಾಟ ಮಾಡಿದ್ದು ವಿಶೇಷವಾಗಿತ್ತು. ನಿವಾಸಿಗಳು ಸಂತೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಮಕ್ಕಳು ವಿವಿಧ ವಸ್ತುಗಳ ವ್ಯಾಪಾರ ನಿರ್ವಹಿಸಿದರೆ, ಗ್ರಾಹಕರಾಗಿ ಪಾಲಕರು, ಸಾರ್ವಜನಿಕರು, ಶಿಕ್ಷಕರು ಪಾಲ್ಗೊಂಡಿದ್ದರು.

ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಭಂಗಿ, ಮುಖ್ಯ ಶಿಕ್ಷಕಿ ಎಸ್.ಚ್. ಉಮಚಗಿ, ಸಿಆರ್‌ಪಿ ಶಿವಾನಂದ ಅಸುಂಡಿ, ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ, ಬಿ.ಬಿ. ಯತ್ನಳ್ಳಿ, ಎಲ್.ಎನ್. ನಂದೆಣ್ಣವರ, ಡಿ.ಡಿ. ಲಮಾಣಿ, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಎಸ್. ಹಿರೇಮಠ, ಮಾಂತೇಶ ಹವಳದ, ರವಿಕುಮಾರ ದೇವರಮನಿ, ಮೌನೇಶ ಶಿರಹಟ್ಟಿ ಇತರರಿದ್ದರು.