ಜಿಲ್ಲೆ

ಮಾರ್ಗ ಮಧ್ಯೆಯೇ ಕೆಟ್ಟು ನಿಲ್ಲುವ ಬಸ್​ಗಳು, ತಾಪಂ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು

ಶಿರಸಿ: ತೀರಾ ಹಳೆಯದಾದ ಬಸ್​ಗಳನ್ನು ಓಡಿಸಲಾಗುತ್ತಿದೆ. ಇದರಿಂದ ಮಾರ್ಗ ಮಧ್ಯದಲ್ಲಿಯೇ ಬಸ್​ಗಳು ಕೆಟ್ಟು ನಿಲ್ಲುತ್ತಿವೆ ಎಂಬ ವಿಷಯ ಗುರುವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಯಿತು.

ಇಲಾಖೆ ಪ್ರಗತಿ ಕುರಿತಂತೆ ಘಟಕ ವ್ಯವಸ್ಥಾಪಕ ಸರ್ವೆಶ ನಾಯ್ಕ ವಿವರಿಸಿದರು. ಕಳೆದ ತಿಂಗಳು 11.10 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ನಿತ್ಯ ಶಕ್ತಿ ಯೋಜನೆಯಿಂದ 2.63 ಲಕ್ಷ ಆದಾಯ ಬರುತ್ತಿದೆ.ನಿತ್ಯ 38ರಿಂದ 40 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. 60 ಚಾಲಕ-ನಿರ್ವಾಹಕರು, 40 ತಾಂತ್ರಿಕ ಸಿಬ್ಬಂದಿ ಕೊರತೆ ಇದೆ. ಇದೆಲ್ಲದರ ನಡುವೆಯೂ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದು ಭರವಸೆ ನೀಡಿದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಸತೀಶ ಹೆಗಡೆ ಮಾಹಿತಿ ನೀಡಿ, ಹವಾಮಾನ ಆಧಾರಿತ ಬೆಳೆ ವಿಮೆ ಮಾಹಿತಿಯಲ್ಲಿ ಕೆಲ ದೋಷ ಕಂಡು ಬಂದಿರುವ ಪರಿಣಾಮ ವಿಮಾ ಕಂಪನಿಯವರು ರಿ ಸಬ್ಮಿಷನ್ ಮಾಡಿದ್ದಾರೆ. ಇದು 45 ದಿನದೊಳಗಡೆ ವಿಲೇವಾರಿ ಆಗಿ, ರೈತರ ಖಾತೆಗೆ ಜಮಾ ಆಗುವ ಸಾಧ್ಯತೆಯಿದೆ. ಬೆಳೆ ವಿಮೆ ಯಾವ ಕಾರಣದಿಂದ ಜಮಾ ಆಗಿಲ್ಲ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. 2023-2024 ನೇ ಸಾಲಿನ ಬೆಳೆ ವಿಮೆ ಕುರಿತು ತೋಟಗಾರಿಕಾ ಇಲಾಖೆಯು ವಿಮಾ ಕಂಪನಿಯ ಜತೆ ನಿರಂತರ ಸಂಪರ್ಕದಲ್ಲಿದೆ. ಹನಿ ನೀರಾವರಿಗೆ ಶೇ. 90ರಷ್ಟು ಸಹಾಯಧನ ಲಭ್ಯವಿದೆ ಎಂದರು.

ಪಂಡಿತ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸಂದೀಪ ಹೆಗಡೆ ಮಾತನಾಡಿ, ಎಚ್​ಎಂಪಿವಿ ನಮ್ಮ ತಾಲೂಕಿನಲ್ಲಿ ಕಂಡುಬಂದಿಲ್ಲ. ಸರ್ಕಾರದ ಸೂಚನೆಯಂತೆ ರೋಗದ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯಲ್ಲಿ 8 ಆಕ್ಸಿಜನ್ ಹಾಸಿಗೆ ಮೀಸಲಿಟ್ಟಿದ್ದೇವೆ. ರೋಗದ ಕುರಿತು ಮುನ್ನೆಚ್ಚರಿಕಾ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾಹಿತಿ ನೀಡಿ, ತಾಲೂಕಿಗೆ ಮಂಜೂರಾಗಿದ್ದ 30 ವಿವೇಕ ಕೊಠಡಿ ಮುಕ್ತಾಯಗೊಂಡಿದ್ದು, ನಗರ ಭಾಗದ ಶಾಲೆಗಳಿಗೆ 8 ಹಾಗೂ ಗ್ರಾಮೀಣ ಭಾಗಗಳ ಶಾಲೆಗೆ 8 ಶೌಚಗೃಹ ಮಂಜೂರಾಗಿತ್ತು. ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಹೊರತುಪಡಿಸಿ, ಉಳಿದ ಎಲ್ಲ ಶೌಚಗೃಹದ ಕಾಮಗಾರಿ ಮುಕ್ತಾಯಗೊಂಡಿದೆ. ಅನಿರ್ಬಂಧಿತ ಯೋಜನೆಯಲ್ಲಿ 30 ಶಾಲೆಗಳಿಗೆ ಅನುದಾನ ಮಂಜೂರಿಯಾಗಿದ್ದು, ಕೆಲಸ ಪ್ರಾರಂಭವಾಗಬೇಕು. 10ನೇ ವರ್ಗದ ವಿದ್ಯಾರ್ಥಿಗಳಿಗೆ 3 ಸರಣಿ ಪರೀಕ್ಷೆ ನಡೆಸಬೇಕು. ವೇಳಾಪಟ್ಟಿ ಬಿಡುಗಡೆಯಾಗಿದೆ. ಫಲಿತಾಂಶ ಪ್ರಗತಿಯಾಗಲು ವಿಶೇಷ ತರಗತಿ 9 ಗಂಟೆಯಿಂದ ಪ್ರಾರಂಭಿಸಲಾಗಿದೆ. ಮಧ್ಯಾಹ್ನದ ಸಮಯದಲ್ಲಿಯೂ ವಿಶೇಷ ತರಗತಿ ನಡೆಸಲಾಗುತ್ತಿದೆ. ಕೆಎಚ್​ಬಿ ಕಾಲನಿಯ ಶಾಲೆಯು ಪಿಎಂ ಶಾಲೆಗೆ ಆಯ್ಕೆಯಾಗಿದ್ದು, ಈ ವರ್ಷ ಬನವಾಸಿ ಎಂಎಚ್ಪಿ ಶಾಲೆ ಮಾರುಗುಡಿ ಶಾಲೆಯಲ್ಲಿ ಪಿಎಂ ಶಾಲೆ ಆರಂಭಿಸಲಾಗುತ್ತದೆ. ಎಲ್​ಕೆಜಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಅನುದಾನದಲ್ಲಿ ಈ ಶಾಲೆ ನಡೆಯುತ್ತದೆ. ಶಾಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 1.5 ಕೋಟಿ ರೂ. ನೀಡುತ್ತದೆ. ಕೆಎಚ್​ಬಿ ಕಾಲನಿ ಪಿಎಂ ಶಾಲೆಗೆ ಪ್ರಥಮ ಹಂತದಲ್ಲಿ 24 ಲಕ್ಷ ರೂ.ಅನುದಾನ ನೀಡಿದ್ದಾರೆ. ಬಂಡಲ ಮತ್ತು ಇಸಳೂರು ಶಾಲೆ ಕೆಪಿಎಸ್ ಶಾಲೆಗೆ ಆಯ್ಕೆಯಾಗಿವೆ ಎಂದು ತಿಳಿಸಿದರು.

ಗ್ರೇಡ್-2 ತಹಸೀಲ್ದಾರ್ ರಮೇಶ ಹೆಗಡೆ ಕಂದಾಯ ಇಲಾಖೆಯ ಮಾಹಿತಿ ನೀಡಿ, ತಾಲೂಕಿನಲ್ಲಿ 23 ಮನೆ ಸಂಪೂರ್ಣ ಹಾನಿಯಾಗಿತ್ತು. 21 ಮನೆಗಳಿಗೆ ಪರಿಹಾರ ನೀಡಲಾಗಿದೆ. ಒಬ್ಬರಿಗೆ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿದೆ. ಒಬ್ಬರಿಗೆ ರೇಷನ್ ಕಾರ್ಡ್ ಇಲ್ಲವಾಗಿದೆ. ಈ ಕಾರಣದಿಂದ ಇಬ್ಬರಿಗೆ ಮಾತ್ರ ಬಾಕಿ ಇದೆ. ಮಾನವ ಹಾನಿಗೆ 5 ಲಕ್ಷ ರೂ. 3 ಜಾನುವಾರುಗಳಿಗೆ ತಲಾ 35 ಸಾವಿರ ರೂ., 0.69 ಕ್ಷೇತ್ರದಲ್ಲಿ ಬೆಳೆ ಹಾನಿಗೆ ಪರಿಹಾರ ನೀಡಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಇಮ್ಮಡಿ ಮಾತನಾಡಿ, ನಗರದಲ್ಲಿ 5 ವಸತಿಗೃಹ ಹಾಗೂ ಬನವಾಸಿಯಲ್ಲಿ ವಸತಿಗೃಹ ಹಾಗೂ 1 ರಿಂದ 5 ನೇ ತರಗತಿಯ ವಸತಿ ಶಾಲೆ ಇದೆ. ಸಿಬ್ಬಂದಿ ಕೊರತೆಯಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಅರಣ್ಯ ಹಕ್ಕು ಅರ್ಜಿಗಳು ತಿರಸ್ಕಾರ ಆಗಿರುವುದು ಮರು ಪರಿಶೀಲನೆ ಆರಂಭವಾಗಿದೆ ಎಂದು ಹೇಳಿದರು.

ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ನಾಗರಾಜ ಪಾಟೀಲ ಮಾತನಾಡಿ, ಗೃಹ ಜ್ಯೋತಿ ಯೋಜನೆಯಲ್ಲಿ 53500 ಸ್ಥಾವರ ನೋಂದಣಿಯಾಗಿದೆ. 33 ಕುಡಿಯುವ ನೀರು ಯೋಜನೆಯಲ್ಲಿ 8 ಕಾಮಗಾರಿಯು ನಡೆಯುತ್ತಿದ್ದು, ಸೂರ್ಯ ಘರ್ ಯೋಜನೆಯಲ್ಲಿ 1 ಕಿಲೋ ವಾಟ್​ಗೆ 30 ಸಾವಿರ, 2 ಕಿಲೋ ವಾಟ್​ಗೆ ಗೆ 60 ಸಾವಿರ, 3 ಕಿಲೋ ವಾಟ್​ಗೆ 98 ಸಾವಿರ ಪೋ›ತ್ಸಾಹ ಧನ ನೀಡಲಾಗುತ್ತದೆ. ಸರ್ಕಾರಿ ಕಟ್ಟಡದಲ್ಲಿ ಸೋಲಾರ್ ಅಳವಡಿಸಬೇಕಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯ ಜತೆ ಸಮನ್ವಯ ಸಭೆ ನಡೆಸಲಾಗಿದೆ. ಕುಸುಮ್ ಬಿ ಯೋಜನೆಯಲ್ಲಿ ಅರ್ಜಿ ವಿಲೇವಾರಿ 3 ವರ್ಷದಿಂದ ಬಾಕಿ ಇದೆ ಎಂದರು.

ಕೃಷಿ, ಆಯುಷ್, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಆರೋಗ್ಯ ಇನ್ನಿತರ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಸಭೆಯ ಅಧ್ಯಕ್ಷತೆ ವಹಿಸಿದ್ದರು.