ಗುಂಡ್ಲುಪೇಟೆಯಿಂದ ಕುಂದಕೆರೆಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನ ಹಿಂಭಾಗದ ಚಕ್ರಗಳು ಕಳಚಿಹೊರಬಂದಿವೆ. 
ಜಿಲ್ಲೆ

ಕಳಚಿದ ಬಸ್ ಚಕ್ರಗಳು

ನಾಗೇಶ ಎಸ್

ಗುಂಡ್ಲುಪೇಟೆ: ಚಲಿಸುತ್ತಿದ್ದ ಬಸ್ಸಿನ ಚಕ್ರಗಳು ಕಳಚಿಕೊಂಡಿದ್ದರೂ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಶನಿವಾರ ಪಟ್ಟಣದಿಂದ ಕುಂದಕೆರೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸಾರಿಗೆ ಬಸ್ಸಿನ ಹಿಂದಿನ ಚಕ್ರಗಳು ಕಳಚಿವೆ. ಜೋರಾದ ಶಬ್ದ ಕೇಳಿದ ಕೂಡಲೇ ಚಾಲಕ ಕೃಷ್ಣನಾಯಕ್ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಒಂದು ಕ್ಷಣ ತಡವಾಗಿದ್ದರೂ ರಸ್ತೆಯ ಬದಿಯ ಹಳ್ಳಕ್ಕೆ ಬಿದ್ದು ಭಾರಿ ಅನಾಹುತ ಸಂಭವಿಸಿ ಪ್ರಯಾಣಿಕರಿಗೆ ಅಪಾಯವುಂಟಾಗುತ್ತಿತ್ತು.

30 ಸಾವಿರ ಕಿ.ಮೀ. ಸಂಚರಿಸಿದ ಪ್ರತಿ ಬಸ್‌ಗಳನ್ನು ಡಾಕಿಂಗ್ ಮಾಡಲಾಗುತ್ತದೆ. ಬಸ್ಸಿನಿಂದ ಬಿಚ್ಚಿದ ಚಕ್ರಗಳಿಗೆ ಗ್ರೀಸಿಂಗ್ ಮತ್ತು ಸರ್ವೀಸ್ ಮಾಡಲಾಗುತ್ತದೆ. ಕಳೆದ ಮೂರು ದಿನಗಳ ಹಿಂದೆ ಈ ಬಸ್ಸಿಗೆ ಗ್ರೀಸ್ ಹಚ್ಚಿ ಡಾಕಿಂಗ್ ಮಾಡಲಾಗಿತ್ತು. ಶುಕ್ರವಾರದಿಂದ ರಸ್ತೆಗಿಳಿದ ಬಸ್ಸು ಶನಿವಾರ ಚಲಿಸುತ್ತಿದ್ದ ಸಂದರ್ಭದಲ್ಲಿ ಹಿಂದಿನ ಚಕ್ರದ ನಟ್ಟುಗಳು ಕಳಚಿಬಿದ್ದು ಎರಡೂ ಚಕ್ರಗಳು ಹೊರಬಂದಿವೆ. ಡ್ರಂನಿಂದ ಲೈನರ್‌ಗಳು ಕಳಚಿರುವುದು ತಾಂತ್ರಿಕ ವೈಫಲ್ಯವಾಗಿದೆ. ಸಮರ್ಪಕವಾಗಿ ಸರ್ವೀಸ್ ಮಾಡಿಸುವುದರಿಂದ ಬಸ್ಸುಗಳು ಪದೇ ಪದೆ ಕೆಟ್ಟುನಿಲ್ಲುತ್ತಿವೆ ಎಂದು ಹೆಸರು ಬಹಿರಂಗಪಡಿಸದ ನೌಕರ ತಿಳಿಸಿದ್ದಾರೆ.