ಕಲಬುರಗಿ: ಪ್ರಪಂಚದಾದ್ಯಂತ ಕರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ರಾಜ್ಯದ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂದಿನಿಂದ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಮತ್ತು ರಾಜ್ಯಗಳಿಗೆ ತೆರಳುವ ಎಲ್ಲಾ ಖಾಸಗಿ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಲಬುರಗಿಯಿಂದ ರಾಜ್ಯ ರಾಜಧಾನಿ ಬೆಂಗಳೂರು, ಬೇರೆ ಬೇರೆ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ತೆರಳುವ ಎಲ್ಲಾ ಖಾಸಗಿ ಬಸ್ಸುಗಳನ್ನು ಸ್ಥಗಿತಗೊಳಿಸಿರುವುದಾಗಿ ಕಲಬುರಗಿ ಜಿಲ್ಲಾಧಿಕಾರಿ ಶರತ್.ಬಿ. ತಿಳಿಸಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ತೆರಳುವ ಬಸ್ಸುಗಳು ಮತ್ತು ರಾಜ್ಯ ಹಲವೆಡೆ ತೆರಳುವ ಬಸ್ಸುಗಳಿಗೆ ಈಗಾಗಲೇ ಬುಕ್ಕಿಂಗ್ ಆಗಿದ್ದು ಅವುಗಳನ್ನು ಸಹ ರದ್ದು ಮಾಡುವಂತೆ ಸೂಚಿಸಲಾಗಿದೆ. ಮುಂದಿನ ಆದೇಶದವರೆಗೂ ನಿಷೇಧ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಗಡಿ ಪ್ರದೇಶಗಳಲ್ಲಿ 17 ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗುವುದು. ಖಾಸಗಿ ಬಸ್ಗಳಲ್ಲಿ ಜಿಲ್ಲೆಗೆ ಬಂದು ಹೋಗಿರುವವರ ಪಟ್ಟಿಯನ್ನು ಕೊಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ವಿದೇಶದಿಂದ ಬಂದವರು ಖಾಸಗಿ ಬಸ್ಗಳ ಮೂಲಕ ಜಿಲ್ಲೆಗೆ ಬಂದಿರುವ ಹಿನ್ನೆಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.