ಹಾವೇರಿ: ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ಬುಧವಾರ ಗ್ರಾಮದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 2 ತಾಸಿಗೂ ಅಧಿಕ ಸಮಯ ಬಸ್ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳು ಗ್ರಾಮಕ್ಕೆ ಬರಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಪ್ರತಿದಿನ ಗ್ರಾಮದಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಹಾವೇರಿ ನಗರದ ಶಾಲಾ-ಕಾಲೇಜ್ಗಳಿಗೆ ಹೋಗುತ್ತಾರೆ. ಗ್ರಾಮಕ್ಕೆ ಬೆಳಗ್ಗೆ 8.30ಕ್ಕೆ ಬರುವ ಬಸ್ನ್ನು 10.30ಕ್ಕೆ ಮತ್ತು ಸಂಜೆ 5ಕ್ಕೆ ಬರುವ ಬಸ್ನ್ನು 7ಕ್ಕೆ ಬಿಡುತ್ತಿದ್ದಾರೆ. ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಪ್ರತಿದಿನ ಕರೆ ಮಾಡಿ ತಿಳಿಸಿದಾಗ ಮಾತ್ರ ಬಸ್ ಬಿಡುತ್ತಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದೇ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ. ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ, ಕಾರ್ವಿುಕರಿಗೆ, ರೈತರ ಮಾರುಕಟ್ಟೆ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ. ಸರ್ಕಾರಿ ಸಾರಿಗೆಯ ಬೇಜವಾಬ್ದಾರಿಯಿಂದ ಜನರು ಖಾಸಗಿ ವಾಹನಗಳಿಗೆ ಹೆಚ್ಚು ಹಣ ಕೊಟ್ಟು ಹೋಗುವ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು. ಗ್ರಾಮಕ್ಕೆ ಬೆಳಗ್ಗೆ 8.30ಕ್ಕೆ ಮತ್ತು ಸಂಜೆ 5ಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡಬೇಕು ಎಂದು ಆಗ್ರಹಿಸಿದರು.
ನಂತರ ಹಾವೇರಿ ಬಸ್ ಡಿಪೋಕ್ಕೆ ಆಗಮಿಸಿ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು ಎಂದು ಗ್ರಾಮಸ್ಥ ಬೀರೇಶ ನೆಟಗಲ್ಲಣ್ಣನವರ ತಿಳಿಸಿದರು.