ಜಿಲ್ಲೆ

ಬಸ್ ನಿಲ್ದಾಣ ಬೇಡಿಕೆಗಿಲ್ಲ ಸ್ಪಂದನೆ

ಇಂದಿರಾ ಎನ್ ಕೆ

ಕುಂದಾಪುರ: ಹೊಸಾಡು ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಗ್ರಾಮಸಭೆ ಹೊಸಾಡು ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.

ಮೂರು ವರ್ಷಗಳಿಂದ ಮುಳ್ಳಿಕಟ್ಟೆ ಸರ್ಕಲ್‌ನಲ್ಲಿ ಬಸ್ ನಿಲ್ದಾಣ ನಿರ್ಮಾಣದ ಬೇಡಿಕೆಗೆ ಗ್ರಾಪಂ ಸ್ಪಂದನೆ ತೋರಿಲ್ಲ. ಆದಷ್ಟು ಬೇಗ ಬಸ್ ನಿಲ್ದಾಣ ನಿರ್ಮಿಸಿ ಎಂದು ಸದಸ್ಯ ರಾಘವೇಂದ್ರ ಶೆಟ್ಟಿ ಒತ್ತಾಯಿಸಿದರು.

ಕಡುಬಿನ ಕೆರೆ ಸರ್ವೇ ಮಾಡುವಂತೆ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗೇಶ್ ಆಚಾರ್ಯ ಸಭೆಯ ಗಮನ ಸೆಳೆದರು. ಇದಕ್ಕೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅವರು ಸಭೆಯಿಂದ ಹೊರನಡೆದರು. ಅರಾಟೆಯಿಂದ ಮೊವಾಡಿ ಕ್ರಾಸ್ ತನಕ ದಾರಿದೀಪ ಅಳವಡಿಕೆಗೆ ಹಾಗೂ ಅರಾಟೆ ಸೇತುವೆ ಬಳಿ ಹೆದ್ದಾರಿಯಲ್ಲಿ ಕ್ರಾಸಿಂಗ್ ನೀಡಿರುವುದರಿಂದ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಪಂಚಾಯಿತಿ ಆಡಳಿತಾಧಿಕಾರಿ ಕುಸುಮಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೇಖಾ, ಸೇನಾಪುರ ವಿಎ ಅನಿಲ್ ಮೇತ್ರಿ, ಹೊಸಾಡು ವಿಎ ಮಾಧವ ಕೊಠಾರಿ, ನೋಡಲ್ ಅಧಿಕಾರಿ ಪರಶುರಾಮ ಮತ್ತ್ಯಪ್ಪ ಗೌಡ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ಶಿವಾನಂದ ವರದಿ ಮಂಡಿಸಿದರು.

ಸರ್ವೀಸ್ ರಸ್ತೆ ನಿರ್ಮಿಸಿ

ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿದೀಪ, ಮುಳ್ಳಿಕಟ್ಟೆ ಸರ್ಕಲ್ ಅಗಲೀಕರಣ ಮತ್ತು ಮುಳ್ಳಿಕಟ್ಟೆಯಿಂದ ಮೊವಾಡಿ ಕ್ರಾಸ್ ತನಕ ಸರ್ವೀಸ್ ರಸ್ತೆ ನಿರ್ಮಿಸುವಂತೆ ವಿಶ್ವನಾಥ ಶೆಟ್ಟಿ, ದಿನೇಶ್ ದೇವಾಡಿಗ, ರಾಘವೇಂದ್ರ ಆಚಾರ್ಯ ಮನವಿ ಮಾಡಿದರು. ಅರಾಟೆ ಎಡ ಬದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಾಸಿಂಗ್ ಸರಿಪಡಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರು.

ಅಭಿವೃದ್ಧಿ ಕೆಲಸ ಕುಂಠಿತ

ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತ ಹಾಗೂ ಸಾರ್ವಜನಿಕ ಅರ್ಜಿಗಳಿಗೆ ಸಮರ್ಪಕ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಪಿಡಿಒ ಗಣೇಶ್ ಹೆಬ್ಬಾರ್ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಸುರೇಶ್ ಪೂಜಾರಿ ಅರಾಟೆ ಕೃಷಿ ಇಲಾಖೆಯಲ್ಲಿ ಸಿಗುತ್ತಿರುವ ಸಬ್ಸಿಡಿ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.