ರಾಯಬಾಗ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಹೈಟೆಕ್ ಬಸ್ ನಿಲ್ದಾಣ. 
ಜಿಲ್ಲೆ

ಬಸ್ ನಿಲ್ದಾಣ ಉದ್ಘಾಟನೆ ಯಾವಾಗ?

| ಸುಧೀರ ಎಂ. ಕಳ್ಳೆ ರಾಯಬಾಗ

ತಾಲೂಕು ಕೇಂದ್ರವಾಗಿರುವ ರಾಯಬಾಗದಲ್ಲಿ ನಾಗರಿಕರಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡುವುದು ಅವಶ್ಯ. ಆ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲು ಸಾರಿಗೆ ಇಲಾಖೆಯಿಂದ ನಿರ್ಮಾಣಗೊಂಡ ಹೈಟೆಕ್ ಬಸ್ ನಿಲ್ದಾಣ ಇನ್ನೂ ಉದ್ಘಾಟನೆಗೊಳ್ಳದಿರುವುದು ಜನರಿಗೆ ನಿರಾಸೆ ಮೂಡಿಸಿದೆ.

ಸಾರಿಗೆ ಇಲಾಖೆಯಿಂದ 2018 ಫೆಬ್ರವರಿಯಲ್ಲಿ ಅಂದಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಪಟ್ಟಣದ ಬಸ್ ನಿಲ್ದಾಣದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು.

ಈಗ ಸುಸಜ್ಜಿತ ಹೈಟೆಕ್ ನೂತನ ಬಸ್ ನಿಲ್ದಾಣ ನಿರ್ಮಾಣಗೊಂಡು ಹಲವು ತಿಂಗಳು ಕಳೆದರೂ, ಇನ್ನುವರೆಗೂ ಬಸ್ ನಿಲ್ದಾಣ ಉದ್ಘಾಟನೆ ಭಾಗ್ಯ ಕಾಣದೆ ಇರುವುದರಿಂದ ಪ್ರಯಾಣಿಕರ ಬಳಕೆಗೆ ಲಭ್ಯವಾಗಿರುವುದಿಲ್ಲ.

ಪಟ್ಟಣದ ಹಳೆಯ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣ ಸುಮಾರು 8 ಬಸ್ ಪ್ಲಾಟ್‌ಫಾರಂ, ಮಳಿಗೆಗಳು, ಸಂಚಾರ ನಿಯಂತ್ರಣ ಕೊಠಡಿ, ಮಹಿಳಾ ವಿಶ್ರಾಂತಿ ಕೊಠಡಿ, ಉಪಾಹಾರ ಗೃಹ ಸೇರಿ ಸುಂದರ ನೆಲಹಾಸಿನೊಂದಿಗೆ ಎರಡು ಮಹಡಿಗಳುಳ್ಳ ಕಟ್ಟಡ ನಿರ್ಮಾಣಗೊಂಡಿದೆ.

ಆದರೆ ಈಗ ನಿರ್ಮಿಸಿದ ಹೈಟೆಕ್ ಬಸ್ ನಿಲ್ದಾಣ ಈಗ ಖಾಸಗಿ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆ. ಸೋಮವಾರ ವಾರದ ಸಂತೆ ದಿನ ಕುರಿ ಮತ್ತು ವ್ಯಾಪಾರಿಗಳ ವಿಶ್ರಾಂತಿ ಸ್ಥಳವಾಗಿದೆ. ಅಷ್ಟೇ ಅಲ್ಲದೆ ಗುಟ್ಕಾ, ತಂಬಾಕು ಹಾಕಿಕೊಂಡು ಜನರು ಎಲ್ಲೆಂದರಲ್ಲಿ ಉಗುಳಿದ್ದರಿಂದ ನಿಲ್ದಾಣ ಗಲೀಜುಗೊಂಡಿದೆ.

ಇನ್ನಾದರೂ ಜಿಲ್ಲೆಯವರೆ ಆದ ಸಾರಿಗೆ ಸಚಿವರು ಮತ್ತು ಸ್ಥಳೀಯ ಶಾಸಕರು ಇತ್ತ ಗಮನಹರಿಸಿ, ಹೈಟೆಕ್ ಬಸ್ ನಿಲ್ದಾಣವನ್ನು ಶೀಘ್ರ ಉದ್ಘಾಟಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ರಾಯಬಾಗ ಪಟ್ಟಣದ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಯು ಶೇ.99ಪೂರ್ಣಗೊಂಡಿದೆ. ಕೆಎಸ್‌ಆರ್‌ಟಿಸಿ ಸಿವಿಲ್ ವಿಭಾಗದವರು ಕಾಮಗಾರಿ ಪೂರ್ಣಗೊಳಿಸಿ ನಮಗೆ ಹಸ್ತಾಂತರಿಸಿದ ಕೂಡಲೇ ಉದ್ಘಾಟನೆ ಮಾಡಲಾಗುವುದು.ಎ.ಆರ್.ಛಬ್ಬಿ ಸಾರಿಗೆ ಘಟಕ ವ್ಯವಸ್ಥಾಪಕ, ರಾಯಬಾಗ
ರಾಯಬಾಗ ಪಟ್ಟಣದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣ ಬೇಗ ಉದ್ಘಾಟನೆ ಗೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಗುಟ್ಕಾ ಜಗಿದು ಉಗುಳಿದ್ದ ರಿಂದ ಉದ್ಘಾಟನೆಗಿಂತ ಬಸ್ ನಿಲ್ದಾಣ ಕಳೆಗುಂದುತ್ತಿದೆ.ಶಶಿಕಾಂತ ಕಾಂಬಳೆ ರಾಯಬಾಗ