ಜಿಲ್ಲೆ

ಬಸ್ ತಂಗುದಾಣಕ್ಕೆ ಕಾಯಕಲ್ಪ

ಪ್ರಸಿನ್ ಕೆ.ಆರ್

ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಎಂಸಿಇ ಇಂಜಿನಿಯರಿಂಗ್ ಕಾಲೇಜಿನ ಇಕೋ ಕ್ಲಬ್ ವಿದ್ಯಾರ್ಥಿಗಳು ಹಾಗೂ ರೋಟರಿ ಹೊಯ್ಸಳ ಕ್ಲಬ್ ಸದಸ್ಯರು ದೊಡ್ಡಮಂಡಿಗನಹಳ್ಳಿ ಗೃಹೇಕಲ್ಲಮ್ಮ ದೇವಸ್ಥಾನದ ಹತ್ತಿರ ಹನ್ನೊಂದು ವರ್ಷಗಳಿಂದ ನಿರ್ಲಕ್ಷೃಕ್ಕೊಳಗಾಗಿದ್ದ ಬಸ್ ತಂಗುದಾಣಕ್ಕೆ ಕಾಯಕಲ್ಪ ಕಲ್ಪಿಸಿದ್ದಾರೆ.

ತಂಗುದಾಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಗೋಡೆಗಳಿಗೆ ಬಣ್ಣ ಹಚ್ಚಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಮಾಜಿ ಸಂಸದ ಪಟೇಲ್ ಶಿವರಾಮ್ ಅವರು 2 ಲಕ್ಷ ರೂ. ಹಾಗೂ ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಅವರು 2015-16ರಲ್ಲಿ 1 ಲಕ್ಷ ರೂ. ಅನುದಾನ ನೀಡಿದ್ದರು. ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗದಲ್ಲಿ ಹಣ ಬಿಡುಗಡೆಗೆ ವಿಳಂಬವಾದ್ದರಿಂದ ಗುತ್ತಿಗೆದಾರರು ಸ್ವಂತ ಹಣದಿಂದ ಭಾಗಶಃ ಕೆಲಸ ಮಾಡಿದ್ದರು. ಆದರೆ ನಿಲ್ದಾಣ ಉಪಯೋಗಕ್ಕೆ ಬಂದಿರಲಿಲ್ಲ. ಇದೀಗ ವಿದ್ಯಾರ್ಥಿಗಳು ಮತ್ತು ರೋಟರಿ ಹೊಯ್ಸಳ ಸದಸ್ಯರು ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಿದ್ದಾರೆ.