ಜಿಲ್ಲೆ

ತಂಗುದಾಣವಿಲ್ಲದೆ ಪ್ರಯಾಣಿಕರು ಕಂಗಾಲು : ಮಳೆ, ಬಿಸಿಲಿನಿಂದ ಪಾರಾಗಲು ತಾತ್ಕಾಲಿಕ ನಿಲ್ದಾಣ ನಿರ್ಮಿಸಲು ಆಗ್ರಹ

ಸೌಮ್ಯ ಆರ್

ಧನಂಜಯ ಗುರುಪುರ

ಒಂದೂವರೆ ವರ್ಷದಿಂದ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾರ್ಯ ಮುಂದುವರಿದಿದ್ದು, ಹೆದ್ದಾರಿಯ ಬಹುತೇಕ ಎಲ್ಲ ಪ್ರಯಾಣಿಕ ತಂಗುದಾಣಗಳು ಧರಾಶಾಯಿಯಾಗಿವೆ. ಪ್ರಸಕ್ತ ಬಸ್ ಮತ್ತಿತರ ವಾಹನಗಳಿಗಾಗಿ ಕಾಯುವ ವಿದ್ಯಾರ್ಥಿಗಳು, ವಯೋವೃದ್ಧರು ಹಾಗೂ ಇತರರು ಬೆಳಗ್ಗಿನಿಂದ ಸಂಜೆವರೆಗಿನ ಪ್ರಖರ ಬಿಸಿಲಿಗೆ ಮೈಯೊಡ್ಡಿ ನಿಲ್ಲುವಂತಾಗಿದೆ.

ಬಸ್ ತಂಗುದಾಣವಿಲ್ಲದ ವಾಮಂಜೂರು ಜಂಕ್ಷನ್‌ನಲ್ಲಿ ಪ್ರಯಾಣಿಕರು ಬಿಸಿಲಿನಿಂದ ಕಂಗಾಲಾಗಿದ್ದರೂ ಹೆದ್ದಾರಿ ಪ್ರಾಧಿಕಾರ ಇತ್ತ ಗಮನಹರಿಸಿದಂತಿಲ್ಲ. ಕನಿಷ್ಠ ತಾತ್ಕಾಲಿಕ ತಂಗುದಾಣವಾದರೂ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಮಳೆ- ಬಿಸಿಲಿನಿಂದ ರಕ್ಷಣೆ ಹೇಗೆ?: ವಾಮಂಜೂರಿನ ಸೇಂಟ್ ಜೋಸೆಫ್ ಕಾಲೇಜು ಎದುರು, ವಾಮಂಜೂರು ಜಂಕ್ಷನ್, ಚೆಕ್‌ಪೋಸ್ಟ್, ಕೆತ್ತಿಕಲ್, ಪರಾರಿಯಲ್ಲಿದ್ದ ಪ್ರಯಾಣಿಕರ ಬಸ್ ತಂಗುದಾಣಗಳು ಹೆದ್ದಾರಿ ವಿಸ್ತರಣೆ ಕಾಮಗಾರಿ ಸಂದರ್ಭ ನೆಲಸಮವಾಗಿವೆ. ಮುಖ್ಯವಾಗಿ ವಾಮಂಜೂರು ಜಂಕ್ಷನ್‌ನ ತಂಗುದಾಣವನ್ನು ಒಂದೂವರೆ ವರ್ಷದ ಹಿಂದೆ ಕೆಡವಲಾಗಿದ್ದು, ಆ ಬಳಿಕ ಪ್ರಯಾಣಿಕರು ಮಳೆ- ಬಿಸಿಲಿಗೆ ಕೊಡೆ ಹಿಡಿದು ನಿಲ್ಲುವಂತಾಗಿದೆ. ಇಲ್ಲವೇ ಹತ್ತಿರದ ಅಂಗಡಿಗಳ ಮೊರೆ ಹೋಗುವಂತಾಗಿದೆ.

ಈ ಬಾರಿ ತಾಪಮಾನ ಹೆಚ್ಚಾಗಿದ್ದು, ಕಾಂಕ್ರೀಟ್ ಮತ್ತು ಡಾಂಬರು ರಸ್ತೆಗಳ ಬದಿಯಲ್ಲಿ ಬಸ್‌ಗಳಿಗಾಗಿ ಕಾಯುವುದು ಕಷ್ಟಕರ. ರಸ್ತೆ ಬದಿಯಲ್ಲಿ ನಿಂತರೆ ಧೂಳಿನ ಸಮಸ್ಯೆ ಎದುರಾಗಿದೆ. ಕಾಮಗಾರಿ ನಡೆಯುವಲ್ಲಿ ವಾಹನಗಳು ಸಂಚರಿಸುವಾಗ ಧೂಳು ಸಾಮಾನ್ಯವಾಗಿದ್ದರೂ ನಿಯಮಿತವಾಗಿ ನೀರು ಹಾಕಿದರೆ ಈ ಸಮಸ್ಯೆ ತಪ್ಪಿಸಬಹುದು.

ಹೆದ್ದಾರಿ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂಬುದು ಗೊತ್ತಿಲ್ಲ. ಕಾಮಗಾರಿ ಮುಗಿದ ಬಳಿಕವೇ ತಂಗುದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ಹೆದ್ದಾರಿ ವಿಸ್ತರಣೆ ಕಾಮಗಾರಿ ಗುತ್ತಿಗೆ ಕಂಪನಿಯ ಮೂಲವೊಂದು ಹೇಳಿದೆ. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ತಾತ್ಕಾಲಿಕ ತಂಗುದಾಣ ನಿರ್ಮಿಸಿ ನಾಗರಿಕರನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸಬಹುದಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಬೇಕೆಂದು ಗೊತ್ತಿಲ್ಲ. ಜನದಟ್ಟಣೆಯ ವಾಮಂಜೂರು ಜಂಕ್ಷನ್‌ನಲ್ಲಿ ಪ್ರಯಾಣಿಕರ ತಂಗುದಾಣವಿಲ್ಲದೆ 2 ವರ್ಷ ಕಳೆದಿವೆ. ಒಂದು ತಾತ್ಕಾಲಿಕ ತಂಗುದಾಣ ನಿರ್ಮಿಸಬಹುದಲ್ಲವೇ? ನಾಗರಿಕರ ಮೂಲಸೌಕರ್ಯದತ್ತ ಸರ್ಕಾರಕ್ಕೆ ಕಾಳಜಿ ಇರುತ್ತಿದ್ದರೆ ಈಗಾಗಲೇ ಇಲ್ಲೊಂದು ತಾತ್ಕಾಲಿಕ ತಂಗುದಾಣ ನಿರ್ಮಾಣವಾಗುತ್ತಿತ್ತು. ಇನ್ನು ಎಷ್ಟು ಕಾಲ ಬಿಸಿಲು ಮಳೆಗೆ ಮೈಯೊಡ್ಡಬೇಕು? ಚಂಚಲಾಕ್ಷಿ, ಮೂಡುಶೆಡ್ಡೆ ಪ್ರಯಾಣಿಕರು ವಾಮಂಜೂರು ಜಂಕ್ಷನ್ ಮತ್ತು ಕೆತ್ತಿಕಲ್‌ನಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರ ಸಂಕಷ್ಟ ನಾನು ಖುದ್ದಾಗಿ ಕಂಡಿದ್ದೇನೆ. ಹೆದ್ದಾರಿ ಬದಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಪ್ರಯಾಣಿಕರ ತಾತ್ಕಾಲಿಕ ತಂಗುದಾಣ ನಿರ್ಮಾಣ ಕಷ್ಟಸಾಧ್ಯ. ವಾಮಂಜೂರು ಜಂಕ್ಷನ್‌ನಲ್ಲಿ ನಾನೇ ಮುಂದೆ ನಿಂತು ತಾತ್ಕಾಲಿಕ ತಂಗುದಾಣ ನಿರ್ಮಿಸಲು ಯೋಚಿಸಿದ್ದೇನೆ. ದಾನಿಗಳು ನೆರವು ನೀಡಿದರೆ ತಿರುವೈಲು ವಾರ್ಡ್ ವ್ಯಾಪ್ತಿಯ ಸೇಂಟ್ ಜೋಸೆಫ್ ಕಾಲೇಜಿನ ಎದುರು, ಚೆಕ್‌ಪೋಸ್ಟ್ ಬಳಿ, ಕೆತ್ತಿಕಲ್ ಮತ್ತು ಪರಾರಿಯಲ್ಲಿ ಪ್ರಯಾಣಿಕರ ತಾತ್ಕಾಲಿಕ ತಂಗುದಾಣ ನಿರ್ಮಿಸಲು ಸಾಧ್ಯವಿದೆ. ಹೇಮಲತಾ ಆರ್.ಸಾಲ್ಯಾನ್, ಮಾಜಿ ಕಾರ್ಪೋರೇಟರ್ https://www.vijayavani.net/pancharati-seve https://www.vijayavani.net/aturu-jathre