ವಿಭೂತಿಕೆರೆ ಶಿವಲಿಂಗಯ್ಯ, ಕೈಲಾಂಚ
ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆ.ಪಿ. ದೊಡ್ಡಿ ಗ್ರಾಮದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ತಂಗುದಾಣ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಜಿಲ್ಲೆಯ ಪ್ರಮುಖ ರಸ್ತೆಯಾಗಿರುವ ರಾಮನಗರ-ಕನಕಪುರ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚರಿಸುತ್ತಾರೆ. ಆದರೆ ಕೆ.ಪಿ. ದೊಡ್ಡಿ ಗ್ರಾಮಕ್ಕೆ ಅರ್ಕಾವತಿ ನದಿ ದಂಡೆಯ ಆಚೆಗಿನ ಕೂನಗಲ್, ಮೂಡ್ಲಳ್ಳಿದೊಡ್ಡಿ, ಲಂಬಾಣಿದೊಡ್ಡಿ, ಆಲೇಮರದದೊಡ್ಡಿ, ಜವಳಗೆರೆದೊಡ್ಡಿ, ಹನುಮಂತೇಗೌಡನದೊಡ್ಡಿ, ಕೆ.ಪಿ.ದೊಡ್ಡಿ ಪಕ್ಕದ ಕೆಂಪೇಗೌಡನದೊಡ್ಡಿ, ಲಾಲಿನಾಯ್ಕನದೊಡ್ಡಿ ಗ್ರಾಮಗಳಿಗೆ ಸಮರ್ಪಕ ಬಸ್ ಸಂಪರ್ಕ ಇಲ್ಲದೇ ಗ್ರಾಮಸ್ಥರು ಪರದಾಡುವಂತಾಗಿದೆ.
ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳು, ಅಂಕನಹಳ್ಳಿ ಗ್ರಾಮಸ್ಥರು ಬಸ್‌ಗಾಗಿ ಕೆ.ಪಿ. ದೊಡ್ಡಿ ಗ್ರಾಮದ ಬಸ್ ನಿಲ್ದಾಣಕ್ಕೆ ಬರುತ್ತಾರೆ. ತೆಗೆ ಕೂನಗಲ್ ಗ್ರಾಮದಲ್ಲಿ ಪ್ರೌಢಶಾಲೆ ಇದ್ದು ಕೈಲಾಂಚ ಹೋಬಳಿಯ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಈ ಮಾರ್ಗದಲ್ಲಿಯೇ ಬರಬೇಕಿದೆ. ಆದರೆ ಬಸ್ ಸಮಯಕ್ಕೆ ಸರಿಯಾಗಿ ಬಸ್ ಸೇವೆ ಇಲ್ಲದ ಕಾರಣ ವಿದ್ಯಾರ್ಥಿಗಳು, ಉದ್ಯೋಗಸ್ಥರು ನಾಗರಿಕರು ರಸ್ತೆಯಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿನಿತ್ಯ ಗ್ರಾಮದಿಂದ ಮತ್ತು ಅಕ್ಕಪಕ್ಕದ ಗ್ರಾಮಗಳಿಂದಲೂ ಕನಕಪುರ-ರಾಮನಗರ ಇತರೆಡೆಗೆ ಹೋಗಲು ವಿದ್ಯಾರ್ಥಿಗಳು, ಸಾರ್ವಜನಿಕರು ಗ್ರಾಮದ ಬಸ್ ನಿಲ್ದಾಣಕ್ಕೆ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಈ ಭಾಗದಲ್ಲಿ ಬಸ್ ಸಂಚಾರ ವಿರಳವಾದ್ದರಿಂದ ಪ್ರಯಾಣಿಕರ ತಂಗುದಾಣವು ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಮರದ ನೆರಳಿನಲ್ಲಿ, ಅಕ್ಕಪಕ್ಕದ ಅಂಗಡಿಗಳ ನೆರಳಲ್ಲಿ ಕುಳಿತು ಬಸ್‌ಗಾಗಿ ಕಾಯಬೇಕಿದೆ. ಸಂಬಂಧಪಟ್ಟ ಇಲಾಖೆ ಶೀಘ್ರವೇ ಬಸ್ ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
--
ಕನಕಪುರ - ರಾಮನಗರ ರಸ್ತೆ ರಾಜ್ಯ ಹೆದ್ದಾರಿಯಾಗಿರುವ ಕಾರಣ ವಾಹನಗಳು ವೇಗದಿಂದ ಚಲಿಸುತ್ತಿರುತ್ತವೆ. ಬಸ್‌ಗಾಗಿ ರಸ್ತೆ ಪಕ್ಕದಲ್ಲಿ ಕಾಯುವ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅತಿವೇಗದಿಂದ ಸಾಗುವ ವಾಹನಗಳು ಆತಂಕ ತರಿಸುತ್ತವೆ. ಈ ಭಾಗದಲ್ಲಿ ಬಸ್ ತಂಗುದಾಣ ನಿರ್ಮಿಸಿದರೆ ಯಾವುದೇ ಆತಂಕವಿಲ್ಲದೆ ಬಸ್ ಬಂದಾಗ ಹತ್ತಿ ಪ್ರಯಾಣಿಸಬಹುದು.
ವಾಸು ಪುಟ್ಟಮಾಸ್ತಿಗೌಡ, ಗ್ರಾಮದ ಮುಖಂಡ
--
ವಿದ್ಯಾರ್ಥಿಗಳು, ಹೆಣ್ಣುಮಕ್ಕಳು, ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಗ್ರಾಮದಲ್ಲಿ ಬಸ್ ತಂಗುದಾಣದ ಅವಶ್ಯಕತೆ ಇದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಬಸ್ ತಂಗುದಾಣ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ.
ಪ್ರಕಾಶ್, ಕೆ.ಪಿ. ದೊಡ್ಡಿ ಗಾ.್ರಪಂ ಸದಸ್ಯ
--
ಕೆ.ಪಿ. ದೊಡ್ಡಿ ಸೇರಿ ಗ್ರಾಪಂ ವ್ಯಾಪ್ತಿಯಲ್ಲಿನ ಇತರ ಗ್ರಾಮಗಳಲ್ಲೂ ಬಸ್ ತಂಗುದಾಣ ನಿರ್ಮಾಣ ಮಾಡಿಸಿಕೊಡುವಂತೆ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಮನವಿ ಮಾಡುತ್ತೇವೆ. ತೆಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೂ ಪತ್ರ ವ್ಯವಹಾರ ಮಾಡಿ ಸಮಸ್ಯೆ ಬಗೆಹರಿಸಲು ಮನವಿ ಮಾಡಲಿದ್ದೇವೆ.
ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ, ಹುಣಸನಹಳ್ಳಿ.