ಜಿಲ್ಲೆ

ರಾತ್ರಿ 7ರ ಬಳಿಕ ಮಂಗಳೂರು-ಧರ್ಮಸ್ಥಳ ಕೆಎಸ್ಸಾರ್ಟಿಸಿ ಕಣ್ಮರೆ!: ಸಮಸ್ಯೆ ವಿವರಿಸಿದ ಗ್ರಾಮಸ್ಥೆ : ಮಡಂತ್ಯಾರು ಜನಸ್ಪಂದನಾ ಸಭೆ : ವಿವಿಧ ಸಮಸ್ಯೆ ಕುರಿತು ಚರ್ಚೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕುಮಟ್ಟದ ಎಲ್ಲ ಸರ್ಕಾರಿ ಅಧಿಕಾರಿಗಳೊಂದಿಗೆ ‘ಜನರ ಬಳಿಗೆ ತಾಲೂಕು ಆಡಳಿತ’ ಮಡಂತ್ಯಾರು ಗ್ರಾಪಂ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಡಂತ್ಯಾರು ಪಂಚಾಯಿತಿಯಲ್ಲಿ ಮಂಗಳವಾರ ನಡೆಯಿತು.

ಮಂಗಳೂರು- ಧರ್ಮಸ್ಥಳ ಕೆಎಸ್ಸಾರ್ಟಿಸಿ ಸಾರಿಗೆ ಬಸ್ ರಾತ್ರಿ 7ರ ಬಳಿಕ ಸಿಗುತ್ತಿಲ್ಲ. ಕೆಲಸದಿಂದ ಬರುವವರಿಗೆ ಸಮಸ್ಯೆ ಕಾಡುತ್ತಿದೆ. ಮಡಂತ್ಯಾರಿನಿಂದ ಬೆಳ್ತಂಗಡಿಗೆ ಪ್ರಯಾಣಿಸುವಾಗ ನಿರ್ವಾಹಕರು ಒರಟಾಗಿ ಮಾತನಾಡುತ್ತಾರೆ. ಬಸ್ ತಡ ಯಾಕೆ ಎಂದು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ, ಕೆಲವೊಮ್ಮ ಬಸ್ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥೆ ಅನುಮ ಹೇಳಿದರು. ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಕೆಎಸ್ಸಾರ್ಟಿಸಿ ವಿಭಾಗದ ಅಧಿಕಾರಿಗಳು ಭರವಸೆ ನೀಡಿದರು.

ರಕ್ತೇಶ್ವರಿ ಪದವಿನಲ್ಲಿ ವಿದ್ಯುತ್ ಇಲ್ಲದೆ 5 ದಿನಗಳು ಕಳೆದಿವೆ. ಪವರ್‌ವ್ಯಾನ್, ಕೆಇಬಿಗೆ ತಿಳಿಸಿದರೂ ಸರಿಪಡಿಸಿಲ್ಲ. ಕುಕ್ಕಳ ಗ್ರಾಮದಲ್ಲಿಯೂ ವಿದ್ಯುತ್ ಇಲ್ಲದೆ ಐದು ದಿನಗಳಾಗಿವೆ. ಮೂಡಯೂರು ಬಳಿ ಟಿಸಿ ಆಫ್ ಆಗಿದ್ದು, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಮಡಂತ್ಯಾರು ಮೆಸ್ಕಾಂ ಜೆಇಗೆ ಕರೆ ಮಾಡಿದರೆ ಫೋನ್ ತೆಗೆಯಲ್ಲ. ನಮ್ಮ ನಂಬರನ್ನು ಬ್ಲಾಕ್ ಮಾಡಿದ್ದಾರೆ ಎಂದು ಸದಸ್ಯ ಹರೀಶ್ ಶೆಟ್ಟಿ ಹೇಳಿದರು. ನಾವು ಮಾತನಾಡಿದರೆ ನೀವು ಆ ಪಕ್ಷದವರು ಇದೀಗ ಈ ಪಕ್ಷದಲ್ಲಿ ಇದ್ದೀರಿ ಎಂದು ಹೇಳುತ್ತಾರೆ. ನಾವು ಪವರ್‌ವ್ಯಾನ್‌ನೊಂದಿಗೆ ಏಣಿ ಹಿಡಿಕೊಂಡು ವಿದ್ಯುತ್ ವ್ಯತ್ಯಯವಾದಲ್ಲಿ ಮೆಸ್ಕಾಂ ಸಿಬ್ಬಂದಿಯಂತೆ ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸದಸ್ಯ ಶೈಲೇಶ್ ತಿಳಿಸಿದರು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿ ನಮಗೆ ಬೇಡ, ಅವರನ್ನು ವರ್ಗಾಯಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಕುಕ್ಕಳ ಗ್ರಾಮದಲ್ಲಿ ಕೆಲ ನಿವಾಸಿಗಳಿಗೆ 94ಸಿ ಆಗದ ಕಾರಣ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸ್ಥಳ ತನಿಖೆ ನಡೆಸಲು ಶಾಸಕರು, ಇಒ, ತಹಸೀಲ್ದಾರ್, ಆರ್‌ಎಫ್‌ಒ, ಗ್ರಾ.ಪಂ. ಸದಸ್ಯರು ಭೇಟಿ ನೀಡಿದರು. ಈ ಬಗ್ಗೆ ಕ್ರಮ ವಹಿಸಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಸದಸ್ಯರಾದ ವಿಶ್ವನಾಥ್, ಶಶಿಪ್ರಭಾ, ಪಾರ್ವತಿ ಹಾಗೂ ರಾಜೀವ, ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಅಧ್ಯಕ್ಷೆ ರೂಪಾ ನವೀನ್ ಸ್ವಾಗತಿಸಿದರು. ಉಪಾಧ್ಯಕ್ಷ ಗೋಪಾಲಕೃಷ್ಣ ನಿರೂಪಿಸಿದರು. ಸದಸ್ಯ ಶೈಲೇಶ್ ವಂದಿಸಿದರು.

ಜಿಲ್ಲೆಗೆ 60 ವಿಎಗಳ ಅಗತ್ಯ

81 ಗ್ರಾಮಗಳಿಗೆ 18 ವಿಎಗಳಿದ್ದು, ಅವರಿಗೆ ಮೂರು ಗ್ರಾಮಗಳ ಜವಾಬ್ದಾರಿ ಇದೆ. ಜಿಲ್ಲೆಗೆ 60 ವಿಎಗಳ ಅಗತ್ಯವಿದೆ. ವಿಎಗಳ ಪರೀಕ್ಷೆ ನಡೆದು ತರಬೇತಿಯಲ್ಲಿದ್ದಾರೆ. ಆಗಸ್ಟ್ 15 ವಿಎಗಳು ನಮ್ಮ ತಾಲೂಕಿಗೆ ಬರುತ್ತಾರೆ ಎಂದು ಶಾಸಕರು ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದು ತಿಳಿಸಿದರು. ಕಣಿಯೂರು ಹೋಬಳಿ ಕೇಂದ್ರದ ಕುರಿತು ಸರ್ಕಾರಕ್ಕೆ ಒತ್ತಡ ಹಾಕಲಾಗುತ್ತದೆ. ಬಾಕಿ ಉಳಿದ 94ಸಿ ಕಡತಗಳನ್ನು ಬೇಗನೆ ವಿಲೇ ಮಾಡುವಂತೆ ವಿ.ಎ.ಗೆ ಶಾಸಕರು ಸೂಚಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಸೂಚನೆ

ಮಡಂತ್ಯಾರು ಯೂನಿಯನ್ ಬ್ಯಾಂಕ್ ಬಳಿ ಕುಡಿಯುವ ನೀರು ಮನೆಗೆ ತೀರ್ಥದ ರೂಪದಲ್ಲಿ ಬರುತ್ತಿದೆ ಎಂದು ಗ್ರಾಮಸ್ಥೆಯೊಬ್ಬರು ಹೇಳಿದ್ದು, ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಶಾಸಕರು ಸೂಚಿಸಿದರು. ನಿವೇಶನಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿದೆ, ನಮಗೆ ದೊರೆತಿಲ್ಲ ಎಂದು ಮಹಿಳೆಯೊಬ್ಬರು ತಿಳಿಸಿದ್ದು, ಮುಂದಿನ ಹಂತದಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗುವುದು ಎಂದು ಶಾಸಕರು ಹೇಳಿದರು. ಪದೆಂಜಿಲಕುಕ್ಕಳ ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಕೆಲಸ ಮಾಡುತ್ತಿದ್ದಾಗ ಕೈಗೆ ಏಟಾಗಿದ್ದು, ಪರಿಹಾರ ಒದಗಿಸುವಂತೆ ಪಂಚಾಯಿತಿಗೆ ಮನವಿ ಮಾಡಲಾಗಿದ್ದು, ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ವಿಘ್ನೇಶ್ ಹೇಳಿದರು. ಈ ಬಗ್ಗೆ ನೀವು ಆರೋಗ್ಯ ಇಲಾಖೆಯೊಂದಿಗೆ ಮಾತನಾಡಿ ಎಂದು ಶಾಸಕರು ತಿಳಿಸಿದರು. ಶಾಸಕರು ಜನರ ಅಹವಾಲುಗಳನ್ನು ಸ್ವೀಕರಿಸಿದರು.