ಕಡೂರಿನಲ್ಲಿ ಹೊಸದಾಗಿ ಗುರುತಿಸಲಾದ ಬಸ್ ಮಾರ್ಗಗಳ ಪಟ್ಟಿಯನ್ನು ಶಾಸಕ ಕೆ.ಎಸ್.ಆನಂದ್ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ಗೆ ನೀಡಿದರು. ಚೆನ್ನಬಸಪ್ಪ, ಪುಟ್ಟಸ್ವಾಮಿ ಇದ್ದರು. 
ಜಿಲ್ಲೆ

ಹೊಸ 12 ಮಾರ್ಗಗಳಲ್ಲಿ ಬಸ್ ಸೇವೆ

ಎಸ್.ಎನ್.ರವೀಂದ್ರ

ಕಡೂರು: ತಾಲೂಕಿನ ಗ್ರಾಮೀಣ ಭಾಗದ 12 ಮಾರ್ಗಗಳನ್ನು ಗುರುತಿಸಿ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಕಲ್ಪಿಸಲು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಮಂಗಳವಾರ ಕೆಎಸ್‌ಆರ್‌ಟಿಸಿ ಕಡೂರು ಉಪವಿಭಾಗದ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿ, ತಾಲೂಕಿನ ಎಲ್ಲ ಪ್ರದೇಶಗಳಿಗೆ ಬಸ್ ಸಂಪರ್ಕ ಕಲ್ಪಿಸುವುದು ಉದ್ದೇಶ. ಹಲವಾರು ಮಾರ್ಗಗಳಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖ್ಯ ರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸುತ್ತವೆಯಾದರೂ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಅಲ್ಲಿಂದ ಊರಿಗೆ ನಡೆದೇ ಹೋಗಬೇಕಾದ ಪರಿಸ್ಥಿತಿ ಇದೆ. ಅಂಥ 12 ಮಾರ್ಗಗಳಲ್ಲಿ ಬರುವ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೆಎಸ್‌ಆರ್‌ಟಿಸಿ ಹೊಸದಾಗಿ ಬಸ್‌ಗಳನ್ನು ಖರೀದಿಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದರ ಫಲವಾಗಿ ಕಡೂರು ತಾಲೂಕಿಗೂ ನಾಲ್ಕು ಹೊಸ ಬಸ್‌ಗಳನ್ನು ನೀಡಿದ್ದಾರೆ. ಮತ್ತಷ್ಟು ಬಸ್‌ಗಳಿಗಾಗಿ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಹೆಚ್ಚಿನ ಸಂಖ್ಯೆಯ ಬಸ್‌ಗಳು ತಾಲೂಕಿಗೆ ಬರಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಡೂರು ಮತ್ತು ಬೀರೂರಿನಲ್ಲಿ ಹೊಸ ಬಸ್‌ಸ್ಟಾೃಂಡ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆ ಕಾರ್ಯವೂ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ. ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್, ಸಾರಿಗೆ ಇಲಾಖೆ ಕಾರ್ಮಿಕ ಕಲ್ಯಾಣಾಧಿಕಾರಿ ಚೆನ್ನಬಸಪ್ಪ, ಡಿಪೋ ಪ್ರಭಾರ ವ್ಯವಸ್ಥಾಪಕ ಪುಟ್ಟಸ್ವಾಮಿ ಇದ್ದರು.