ಚೇತನ್ ಮಧುರೆ
ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳು ಹಾಗೂ ಇನ್ನಿತರ ಪ್ರಯಾಣಿಕರಿಗೆ ಬರೆ ಎಳೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರವನ್ನು ಗಣನೀಯವಾಗಿ ತಗ್ಗಿಸಿದ ಪರಿಣಾಮವಾಗಿ ಪ್ರತಿದಿನ ಪ್ರಯಾಣಿಕರು ಗೋಳಾಡುವಂತಾಗಿದೆ.
ಹೌದು. ದೊಡ್ಡಬಳ್ಳಾಪುರದಿಂದ ನೆಲಮಂಗಲಕ್ಕೆ ಸಾಗುವ ಮಧುರೆ ಹೋಬಳಿ ಮಾರ್ಗದಲ್ಲಿನ ಬಸ್ ಸಂಚಾರ ಅವ್ಯವಸ್ಥೆಯಾಗಿದ್ದು, ಪ್ರತಿದಿನ ವಿದ್ಯಾರ್ಥಿಗಳು ಹಾಗೂ ಇನ್ನಿತರ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್‌ನ ಪುಟ್‌ಬೋರ್ಡ್‌ನಲ್ಲಿ ನೇತಾಡುತ್ತಾ ಸಾಗುವ ಪ್ರಯಾಣಿಕರು ಅಪಾಯದೊಂದಿಗೆ ಕಸರತ್ತು ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಗ್ರಾಮೀಣ ಭಾಗಗಳಲ್ಲಿ ಸಮರ್ಪಕ ಬಸ್ ಸೌಕರ್ಯವಿಲ್ಲ ಎಂಬ ದಶಕಗಳ ಕೂಗಿದೆ ಸಾರಿಗೆ ಇಲಾಖೆ ಕಿವುಡಾಗಿಯೇ ವರ್ತಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಎಂಟಿಸಿ ಬಸ್‌ಗಳು ಸ್ಥಗಿತ: ಈ ಹಿಂದೆ ನೆಲಮಂಗಲದಿಂದ ದೊಡ್ಡಬಳ್ಳಾಪುರ ಮಾರ್ಗದಲ್ಲಿ ಸಾಕಷ್ಟು ಬಿಎಂಟಿಸಿ ಬಸ್ ಸಂಚಾರವಿತ್ತು. ಕೆಲವು ತಿಂಗಳಿಂದ ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು ಕೆಸ್ಸಾರ್ಟಿಸಿ ಬಸ್‌ಗಳನ್ನು ಈ ಮಾರ್ಗದಲ್ಲಿ ನಿಯೋಜಿಸಲಾಗಿದೆ. ಆಗೊಂದು ಈಗೊಂದು ಬರುವ ಕೆಸ್ಸಾರ್ಟಿಸಿ ಬಸ್‌ಗಳಲ್ಲಿ ನಿಲ್ಲಲೂ ಜಾಗವಿಲ್ಲದೆ ಪ್ರಯಾಣಿಕರು ಪ್ರಯಾಸಪಡುವಂತಾಗಿದೆ. ಬಸ್ ಏರಲಾದರೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಪಾವಸ್ ಮನೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಡಿಪೋ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ ನಾವೇನು ಮಾಡೋಕಾಗಲ್ಲ ಎಂದು ಆಕಾಶ ದಿಟ್ಟಿಸುತ್ತಾರೆ ನಾವು ಈ ಸಮಸ್ಯೆ ಪರಿಹಾರಕ್ಕೆ ಯಾರನ್ನು ಕೇಳೋದು ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಬಸ್ ಬರುವ ಗ್ಯಾರಂಟಿ ಇಲ್ಲ: ಎರಡ್ಮೂರು ಬಸ್‌ಗಳಲ್ಲಿ ಪ್ರಯಾಣಿಸುವಷ್ಟು ಪ್ರಮಾಣದ ಪ್ರಯಾಣಿಕರು ಒಂದೇ ಬಸ್‌ನಲ್ಲಿ ಸಾಗುತ್ತಿದ್ದಾರೆ. ಸುಮಾರು ಮುಕ್ಕಾಲು ಗಂಟೆಗೊಮ್ಮೆ ಎಂಬಂತೆ ಈ ಮಾರ್ಗದಲ್ಲಿ ಬಸ್‌ಗಳು ಬರುತ್ತವೆ. ಅದೂ ಗ್ಯಾರಂಟಿ ಇಲ್ಲ. ಒಂದು ಬಸ್ ತಪ್ಪಿದರೆ ಮತ್ತೊಂದು ಬಸ್ ಬರುತ್ತದೆ ಎಂಬ ಖಾತರಿ ಇಲ್ಲ ಇದರಿಂದ ಅನಿವಾರ್ಯವಾಗಿ ಬಂದ ಬಸ್ಸನ್ನೇರಿ ಸಾಗಲು ಪ್ರಯಾಣಿಕರು ಇನ್ನಿಲ್ಲಸ ಸರ್ಕಸ್ ಮಾಡುವಂತಾಗಿದೆ. ಉಸಿರುಗಟ್ಟುವಂತ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬೇಕಾಗಿದೆ, ಕೆಲವೊಮ್ಮೆ ತಕ್ಷಣ ಬ್ರೇಕ್ ಹಾಕಿದರೆ ಅಥವಾ ರಸ್ತೆ ಉಬ್ಬು ದಾಟಿದರೆ ಒಬ್ಬರು ಮತ್ತೊಬ್ಬರ ಮೇಲೆ ಬೀಳುವಂತಾಗುತ್ತದೆ ಇದು ಕೆಲವು ವೇಳೆ ಪ್ರಯಾಣಿಕರ ನಡುವೆ ವಾಗ್ವಾದ ಜಗಳಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ತರಗತಿಗಳು ತಪ್ಪುತ್ತಿವೆ: ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ಮಾರ್ಗದಲ್ಲಿ ಸಾಕಷ್ಟು ಶಾಲಾ ಕಾಲೇಜುಗಳಿದ್ದು ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಸ್‌ಗಳ ಕೊರತೆಯಿಂದ ಇರುವ ಬಸ್‌ಗಳಲ್ಲೇ ಬಸ್‌ನ ಪುಟ್‌ಬೋರ್ಡ್‌ನಲ್ಲಿ ಜೋತಾಡುತ್ತಾ ಸಾಗುವಂತಾಗಿದೆ. ಮುಂಜಾನೆ ವೇಳೆ ಶಾಲಾ ಕಾಲೇಜುಗಳಿಗೆ ಸರಿಯಾದ ವೇಳೆಗೆ ತಲುಪಲು ಸಾಧ್ಯವಾಗದೆ ತರಗತಿಗಳನ್ನು ತಪ್ಪಿಸಿಕೊಳ್ಳುವಂತಾಗುತ್ತಿದೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೆಟ್ಟುಬೀಳುವಂತಾಗಿದೆ. ಈಗಾಗಲೇ ದೊಡ್ಡಬಳ್ಳಾಪುರ ಭಾಗದಲ್ಲಿ ಬಹಳಷ್ಟು ಬಾರಿ ವಿದ್ಯಾರ್ಥಿಗಳು ಬಸ್ ಸೌಕರ್ಯಕ್ಕಾಗಿ ಹಲವು ಬಾರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಕೆಸ್ಸಾರ್ಟಿಸಿ ಅಧಿಕಾರಿಗಳಾಧಿಯಾಗಿ ಸ್ಥಳೀಯ ಶಾಸಕರು ಅನೇಕ ಬಾರಿ ಸಭೆ ನಡೆಸಿದ್ದಾರೆ ಆದರೂ ಬಸ್ ಸೌಕರ್ಯದ ಕೊರತೆ ಈ ಭಾಗದಲ್ಲಿ ಜೀವಂತವಾಗಿಯೆ ಉಳಿದಿದೆ.
ಶಾಸಕ ಧೀರಜ್‌ಮುನಿರಾಜು ಅವರ ಒತ್ತಾಯದಂತೆ ಈ ಹಿಂದೆ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಮಾರ್ಗವಾಗಿ ಬಿಎಂಟಿಸಿ ಬಸ್ ಬಸ್ ಸಂಚಾರವಿತ್ತು. ಆದರೆ ಹಲವು ತಿಂಗಳಿಂದ ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಇದರಿಂದ ವಿದ್ಯಾರ್ಥಿಗಳಿ ಹಾಗೂ ಇನ್ನಿತರ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಕೂಡಲೇ ಸಂಬಂಧಪಟ್ಟವರು ಅಗತ್ಯ ಕ್ರಮವಹಿಸಬೇಕು.
ಎನ್.ಆರ್.ಮನು, ಅಧ್ಯಕ್ಷ, ಕಾಡನೂರು ಗ್ರಾಮ ಪಂಚಾಯತಿ