ಅಳವಂಡಿ ಸಮೀಪದ ಹೈದರನಗರ ಮತ್ತು ಹಟ್ಟಿ ಗ್ರಾಮದ ನಡುವೆ ಕೆಕೆಆರ್‌ಟಿಸಿ ಬಸ್ ಪಲ್ಟಿಯಾಗಿರುವುದು. 
ಜಿಲ್ಲೆ

ಬಸ್ ಪಲ್ಟಿಯಾಗಿ 45ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಅಳವಂಡಿ: ಸಮೀಪದ ಹೈದರನಗರ ಮತ್ತು ಹಟ್ಟಿಗ್ರಾಮದ ಮಧ್ಯೆ ಚಾಲಕ ನಿಯಂತ್ರಣ ತಪ್ಪಿ ಕೆಕೆಆರ್‌ಟಿಸಿ ಬಸ್ ಪಲ್ಟಿಯಾಗಿದ್ದರಿಂದ 45ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಕೇಸಲಾಪುರಯಿಂದ ಹೈದರನಗರ, ಹಟ್ಟಿಮಾರ್ಗವಾಗಿ ಅಳವಂಡಿಗೆ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 60ಕ್ಕೂ ವಿದ್ಯಾರ್ಥಿಗಳಿದ್ದರು. ಬಸ್ ಪಲ್ಟಿಯಾದ ತಕ್ಷಣ ವಿದ್ಯಾರ್ಥಿಗಳು ಪಾಲಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಪಾಲಕರು ಹಾಗೂ ಹೈದರನಗರ ಗ್ರಾಮಸ್ಥರು ಬಂದು ಬಸ್‌ನಲ್ಲಿ ಇದ್ದ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ.

ಗಾಯಗೊಂಡವರನ್ನು ಗದಗ ಜಿಲ್ಲೆಯ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ 23 ಜನ ಗಾಯಾಳುಗಳನ್ನು ಹಾಗೂ ಅಳವಂಡಿ ಆಸ್ಪತ್ರೆಯಲ್ಲಿ 27 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಟ್ಟಿ ಹಾಗೂ ಹೈದರನಗರ ರಸ್ತೆ ದುರಸ್ತಿಗಾಗಿ ರಸ್ತೆಯನ್ನು ಅಗೆಯಲಾಗಿದೆ. ಹಾಗೂ ಬಸ್‌ನ ಪಾಟಾ ಮುರಿದಿದ್ದರಿಂದ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದೆ. ರಸ್ತೆ ಪಕ್ಕ ಮರದ ಮೇಲೆ ಬಸ್ ನಿಂತಿದೆ. ಹಿಗಾಗಿ ಬಸ್ ಪೂರ್ತಿ ಪಲ್ಟಿ ಆಗಿಲ್ಲ. ಮರ ಹೆಚ್ಚಿನ ಅನಾಹುತ ತಪ್ಪಿಸಿದೆ.

ಸ್ಥಳಕ್ಕೆ ಪಿಎಸ್‌ಐ ಪ್ರಹ್ಲಾದ್ ನಾಯಕ ಭೇಟಿ ನೀಡಿ, ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು. ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ, ಡಿಎಮ್ ರಮೇಶ, ಡಿಎಮ್‌ಇ ಬಸವರಾಜ, ಎಸ್‌ಈ ಮಂಜುನಾಥ ಮುಂಡರಗಿ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.