ಜಿಲ್ಲೆ

ನಿಯಂತ್ರಣ ತಪ್ಪಿ ಗೂಡಂಗಡಿಗೆ ನುಗ್ಗಿದ ಬಸ್

ಕುಮಟಾ: ತಾಲೂಕಿನ ಹೆಗಡೆಯಿಂದ ಕುಮಟಾಕ್ಕೆ ಬರುತ್ತಿದ್ದ ಸಾರಿಗೆ ಬಸ್​ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೂಡಂಗಡಿಗೆ ನುಗ್ಗಿದ ಘಟನೆ ಗುರುವಾರ ಬೆಳಗ್ಗೆ ಪಟ್ಟಣದ ಕೈಗಾರಿಕಾ ಪ್ರದೇಶದ ಬಳಿ ಸಂಭವಿಸಿದೆ.

ಘಟನೆಯಲ್ಲಿ ಯಾರಿಗೂ ಪೆಟ್ಟಾಗಿಲ್ಲ, ಆದರೆ, ಗೂಡಂಗಡಿ ಸಂಪೂರ್ಣ ಹಾನಿಯಾಗಿದೆ.

ಘಟನೆಗೆ ಬಸ್​ನ ಸ್ಟೇರಿಂಗ್ ರಾಡ್ ತುಂಡಾಗಿದ್ದೇ ಕಾರಣ ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನ ನಾಗೇಶ ಎಂಬುವವರ ಗೂಡಂಗಡಿಗೆ ನುಗ್ಗಿದೆ.

ಹಬ್ಬದ ಪ್ರಯುಕ್ತ ಗೂಡಂಗಡಿ ತೆರೆದಿರಲಿಲ್ಲ. ಹೀಗಾಗಿ ಅಪಾಯ ತಪ್ಪಿದಂತಾಗಿದೆ. ಘಟನೆಯ ಕುರಿತು ಮಾಹಿತಿ ಪಡೆದ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ತೆರಳಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರ ಸ್ಥಿತಿಗತಿ ವಿಚಾರಿಸಿದರು. ಗೂಡಂಗಡಿಕಾರನಿಗೆ ಉಂಟಾದ ಹಾನಿಗೆ ಕೂಡಲೇ ಪರಿಹಾರ ಕೊಡಿಸಿದರು.