ಮಂಗಳೂರು: ಈ ವಾರ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆ ಕರೆಯಲಿದ್ದು, ಬಸ್ ಪರಿಷ್ಕೃತ ಪ್ರಯಾಣ ದರದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಶೇ.50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶವಿದ್ದಾಗ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರವನ್ನು ಕೆಲದಿನಗಳ ಹಿಂದೆ ತಾತ್ಕಾಲಿಕವಾಗಿ ಏರಿಕೆ ಮಾಡಲಾಗಿತ್ತು. ಇದೀಗ ಬಸ್‌ಗಳಲ್ಲಿ ಆಸನ ಇರುವಷ್ಟು ಮಂದಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಏರಿಕೆ ದರದ ಬದಲಾಗಿ ಈ ಹಿಂದಿನ ಪ್ರಯಾಣ ದರವನ್ನೇ ಮುಂದುವರಿಸಲು ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ. ಈ ಜಿಜ್ಞಾಸೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೋಮವಾರ ಬಸ್ ಮಾಲೀಕರ ಸಂಘದವರನ್ನು ಮಾತುಕತೆಗೆ ಕರೆದಿದ್ದಾರೆ. ಅವರೊಂದಿಗೆ ಚರ್ಚಿಸಿದ ಬಳಿಕ ಈ ವಾರದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ಕರೆದು ಬಸ್ ಪ್ರಯಾಣ ದರದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ರಾತ್ರಿ 9 ಗಂಟೆವರೆಗೆ ಬಸ್: ಕೆಲದಿನಗಳ ಹಿಂದೆ ಕೆಲವೇ ಬಸ್‌ಗಳು ಕಾರ್ಯಾರಂಭಿಸಿದ್ದರೆ ಸೋಮವಾರದಿಂದ ಬಹುತೇಕ ಎಲ್ಲ ಬಸ್‌ಗಳೂ ಬಸ್ ಆಸನ ವ್ಯವಸ್ಥೆ ಇರುವಷ್ಟು ಪ್ರಯಾಣಿಕರನ್ನು ಭರ್ತಿ ಮಾಡುವ ಅವಕಾಶದೊಂದಿಗೆ ರಸ್ತೆಗಿಳಿಯುತ್ತಿವೆ. ಜು.19ರವರೆಗೆ ಬೆಳಗ್ಗಿನಿಂದ ರಾತ್ರಿ 9 ಗಂಟೆಯವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳ ಓಡಾಟವಿರಲಿದೆ. ಕೆಎಸ್ಸಾರ್ಟಿಸಿ ಬಸ್‌ಗಳು ತಮ್ಮ ಸೇವೆ ಮುಂದುವರಿಸಲಿವೆ.
ಸರ್ಕಾರದ ಅನ್‌ಲಾಕ್ ಆದೇಶದಲ್ಲಿ ರಾತ್ರಿ 9 ಗಂಟೆವರೆಗೆ ಬಸ್ ಓಡಿಸಲು ಅನುಮತಿಸಲಾಗಿದೆ. ರಾತ್ರಿ 9ರ ಒಳಗಾಗಿ ಬಸ್ ಸಂಚಾರ ನಿಲುಗಡೆಯಾಗಬೇಕು. ಹಾಗಾಗಿ ಕೊನೆಯ ಟ್ರಿಪ್ ಕಡಿತ ಮಾಡುವ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.
ಮಂಗಳೂರಿನಿಂದ ಕೊಡಗು ಹೊರತುಪಡಿಸಿ ಬೇರೆಲ್ಲ ಜಿಲ್ಲೆಗಳಿಗೆ ಸರ್ಕಾರಿ ರಾತ್ರಿ ಬಸ್ ಸಂಚಾರ ಆರಂಭಿಸಲಾಗಿದೆ. ಕೆಎಸ್ಸಾರ್ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗದಿಂದ ಈಗಾಗಲೇ ಬೆಂಗಳೂರಿಗೆ ರಾತ್ರಿ ಬಸ್ ಸಂಚಾರ ಆರಂಭಗೊಂಡಿದೆ. ಕಳೆದ ಎರಡು ದಿನಗಳಿಂದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ತಲಾ ನಾಲ್ಕೈದು ಬಸ್‌ಗಳು ಬೆಂಗಳೂರಿಗೆ ಸಂಚಾರ ಆರಂಭಿಸಿವೆ. ಭಾನುವಾರ ಕೂಡ ಎರಡು ವಿಭಾಗದಿಂದ ಕೆಎಸ್ಸಾರ್ಟಿಸಿ ಬಸ್‌ಗಳು ಬೆಂಗಳೂರಿಗೆ ತೆರಳಿವೆ. ಆದರೆ ಮೈಸೂರು, ಮಂಡ್ಯ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಕೊಡಗು ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಕಾರಣ ದೂರದೂರುಗಳಿಗೆ ವಯಾ ಮಡಿಕೇರಿ ಮೂಲಕ ಸದ್ಯಕ್ಕೆ ಬಸ್ ಸಂಚಾರ ಕಷ್ಟ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿ ಈ ವಾರದಲ್ಲಿ ಸಾರಿಗೆ ಪ್ರಾಧಿಕಾರದ ಸಭೆ ನಡೆಸಿ ನಿರ್ಧರಿಸಲಾಗುವುದು. ಸೋಮವಾರ ಬಸ್ ಮಾಲೀಕರ ಸಂಘದ ಜತೆ ಪ್ರಯಾಣ ದರಕ್ಕೆ ಸಂಬಂಧಿಸಿ ಚರ್ಚೆ ನಡೆಸಲಾಗುವುದು.
- ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.