ಜಿಲ್ಲೆ

ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ

ಮಾದೇಶ್ ತಿ.ನರಸೀಪುರ

ಶ್ರೀರಂಗಪಟ್ಟಣ: ಕೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ನಗರ ಸಾರಿಗೆ ಬಸ್ ಮೇಲೆ ಕಲ್ಲು ತೂರಿ ಬಾಗಿಲ ಗಾಜುಗಳನ್ನು ಒಡೆಯುವ ಜತೆಗೆ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಮೂವರನ್ನು ಶ್ರೀರಂಗಪಟ್ಟಣ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ನಗರದ ಫಿಶ್ ಮಾರ್ಕೆಟ್ ಬಡಾವಣೆಯ ಫೈರೋಜ್ ಮತ್ತು ಆತನ ಕುಟುಂಬದ ಇಬ್ಬರು ಬಾಲಕರು ಬಂಧಿತರು.

ಶಿವಮೊಗ್ಗ ನಗರದ ಫೈರೋಜ್ ಕುಟುಂಬ ಸಮೇತ ಶ್ರೀರಂಗಪಟ್ಟಣ ರಾಜ್ಯ ಸಾರಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಹೊರಡುತ್ತಿದ್ದ ಯಾವುದೇ ಮಾರ್ಗ ವಿಚಾರಿಸದೆ ಹತ್ತಿದ್ದರು. ಗುಂಬಸ್ ಅಥವಾ ದರಿಯದೌಲತ್ ಕಡೆಗೆ ಬರುತ್ತಿದ್ದಾರೆ ಎಂದು ಬಸ್ ಚಾಲಕ, ನಿರ್ವಾಹಕ ಹತ್ತಿಸಿಕೊಂಡಿದ್ದಾರೆ. ಆದರೆ ಬಸ್ ಗಂಜಾಂ ಮಾರ್ಗದ ಕಡೆಗೆ ಹೋಗುವುದನ್ನು ಕಂಡ ಫೈರೋಜ್ ಹಾಗೂ ಕುಟುಂಬಸ್ಥರು ತಾವು ಮೈಸೂರಿಗೆ ಹೋಗಬೇಕು. ಬಸ್‌ಅನ್ನು ಬೆಂಗಳೂರು-ಮೈಸೂರು ಹೆದ್ದಾರಿ ಸ್ಥಳದಲ್ಲೇ ನಿಲ್ಲಿಸಿ ಎಂದು ಕೂಗಿಕೊಂಡಿದ್ದಾರೆ.

ಹೆದ್ದಾರಿ ನಡು ರಸ್ತೆ ಹಾಗೂ ಪಕ್ಕದಲ್ಲೇ ಆಟೋನಿಲ್ದಾಣ ಇದ್ದ ಕಾರಣ ನಿಲುಗಡೆಯಿಂದ ಟ್ರಾಫಿಕ್ ಉಂಟಾಗುತ್ತದೆ ಎಂಬ ಕಾರಣಕ್ಕೆ ಚಾಲಕ ಸ್ವಲ್ಪ ದೂರ ಬಸ್ ನಿಲ್ಲಿಸಲು ಮುಂದೆ ಚಲಾಯಿಸಿದ್ದಾನೆ. ಇದರಿಂದ ಕೋಪಗೊಂಡ ಫೈರೋಜ್ ಮತ್ತು ಇಬ್ಬರು ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ದಿಗಿಲುಗೊಂಡ ಚಾಲಕ ಸಾರ್ವಜನಿಕ ಆಸ್ಪತ್ರೆ ಸಮೀಪ ಬಸ್ ನಿಲ್ಲಿಸಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕುಪಿತಗೊಂಡು ಕೆಳಗಿಳಿದ ಫೈರೋಜ್ ಹಾಗೂ ಇಬ್ಬರು ಬಾಲಕರು ಬಸ್‌ನ ಗಾಜಿಗೆ ಕಲ್ಲು ತೂರಿ ಗಾಜು ಪುಡಿ ಮಾಡಿದ್ದಾರೆ.

ಘಟನೆಯಿಂದ ಆತಂಕಕ್ಕೆ ಒಳಗಾದ ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಹಾಗೂ ಹೊರಗಡೆ ಗಲಾಟೆ ಕಂಡ ಸ್ಥಳೀಯ ಆಟೋ ಚಾಲಕರು ತಕ್ಷಣವೇ ದೌಡಾಯಿಸಿ ಸಾರಿಗೆ ಸಿಬ್ಬಂದಿ ಸಹಾಯಕ್ಕೆ ಮುಂದಾಗಿದ್ದಾರೆ. ಫೈರೋಜ್ ಮತ್ತು ಬಾಲಕರನ್ನು ಸುತ್ತವರೆದು ಹಿಡಿದು ಬಸ್‌ನಲ್ಲೇ ಕೂಡಿಹಾಕಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಟ್ಟಣ ಠಾಣೆ ಪೊಲೀಸರು ಬಸ್‌ನಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಷಯ ತಿಳಿದು ಠಾಣೆಗೆ ನಗರ ಸಾರಿಗೆ ಸಂಸ್ಥೆಯ ಸೆಕ್ಯೂರಿಟಿ ಆಫೀಸರ್ ರವೀಂದ್ರ ಮತ್ತು ಡಿಪೋ ಮ್ಯಾನೇಜರ್ ಮಮತಾ ಆಗಮಿಸಿ ನಿಗಮದ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಚಾಲಕ, ನಿರ್ವಾಹಕ ನೀಡಿದ ದೂರಿನನ್ವಯ ಶ್ರೀರಂಗಪಟ್ಟಣ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.