ಮಂಗಳೂರು: ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಅಶ್ಲೀಲವಾಗಿ ವರ್ತಿಸಿದ ಆರೋಪದಲ್ಲಿ ಖಾಸಗಿ ಬಸ್ಸೊಂದರ ನಿರ್ವಾಹಕನನ್ನು ಪಾಂಡೇಶ್ವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಉಪ್ಪಿನಂಗಡಿ ಕಲ್ಲೇರಿ ಮೂಲದ, ಪ್ರಸ್ತುತ ಕರ್ವೇಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇರ್ಫಾನ್ (32) ಬಂಧಿತ ಆರೋಪಿ. ಮಂಗಳೂರು- ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ಸೊಂದರ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ. ಈತ ಮದ್ಯ ಸೇವನೆ ಚಟ ಹೊಂದಿದ್ದು, ಬಸ್‌ನಲ್ಲಿ ಕರ್ತವ್ಯ ನಿರತನಾಗಿದ್ದಾಗಲೂ ಅಮಲು ಪದಾರ್ಥ ಸೇವಿಸುತ್ತಿದ್ದ ಎಂದು ತಿಳಿದು ಬಂದಿದೆ.
ಜು.9ರಂದು ಸಂಜೆ 5 ಗಂಟೆಗೆ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿಕೊಂಡು ಬಸ್ಸಿನಲ್ಲಿ ಅಶ್ಲೀಲವಾಗಿ ವರ್ತಿಸಿ, ಅಸಭ್ಯ ಸನ್ನೆಯನ್ನು ಮಾಡಿದ್ದಾನೆ. ಮಾತ್ರವಲ್ಲದೆ ಹಿಂದಿನ ಸೀಟಿಗೆ ಬರುವಂತೆ ವಿದ್ಯಾರ್ಥಿನಿಯರನ್ನು ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯರು ನೀಡಿದ ದೂರಿನಂತೆ ಪಾಂಡೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.