ಭರತ್ ಶೆಟ್ಟಿಗಾರ್ ಮಂಗಳೂರು
ನಗರದಲ್ಲಿ ಈಗಾಗಲೇ ಇರುವ ಬಸ್ ಬೇಗಳ ಜತೆ ಅವಶ್ಯಕತೆ ಹಾಗೂ ಸ್ಥಳ ಇರುವಲ್ಲಿ ಇನ್ನಷ್ಟು ಬಸ್ ಬೇ ನಿರ್ಮಾಣವಾಗಲಿದೆ. ಮಹಾನಗರಪಾಲಿಕೆ ವ್ಯಾಪ್ತಿಯ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರ ಉದ್ದೇಶದಿಂದ ಬಸ್ ಬೇಗಳನ್ನು ರಚಿಸಲು ಉದ್ದೇಶಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳು ಪ್ರಸ್ತುತ ವಾಹನ ದಟ್ಟಣೆಯಿಂದ ಕೂಡಿದ್ದು, ವಾಹನಗಳ ಸುಗಮ ಸಂಚಾರಕ್ಕಾಗಿ ಬಸ್ ಬೇ ನಿರ್ಮಿಸುವುದು ಅಗತ್ಯ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 1.09 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ನಗರದ ಲಾಲ್‌ಭಾಗ್, ಅಂಬೇಡ್ಕರ್ ವೃತ್ತದ ಒಂದು ಕಡೆ, ನಂತೂರು, ಸರ್ಕೀಟ್ ಹೌಸ್ ಬಳಿ, ಕೂಳೂರು ಮೊದಲಾದೆಡೆಗಳಲ್ಲಿ ಬಸ್ ಬೇ ಇವೆ. ಇದೀಗ ಹೊಸದಾಗಿ ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟೆ, ಮೇರಿಹಿಲ್, ಕುಲಶೇಖರ ಮೊದಲಾದೆಡೆ ಬಸ್ ಬೇ ನಿರ್ಮಾಣವಾಗಲಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಕ್ರಿಯಾ ಯೋಜನೆಗೆ 2019ರಲ್ಲಿ ಸರ್ಕಾರದಿಂದ 125 ಕೋಟಿ ರೂ. ಮೊತ್ತ ಹಂಚಿಕೆಯಾಗಿದ್ದು, 2019-20ರಿಂದ 2023-24ನೇ ಸಾಲಿನವರೆಗೆ 5 ವರ್ಷದ ಅವಧಿಯಲ್ಲಿ 99.93 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 1.09 ಕೋಟಿ ರೂ. ವೆಚ್ಚದಲ್ಲಿ ಬಸ್ ಬೇಗಳನ್ನು ನಿರ್ಮಿಸಲು ಮೀಸಲಿರಿಸಲಾಗಿದೆ.
ಏನಿದು ಬಸ್ ಬೇ?: ಬಸ್ ತಂಗುದಾಣದಲ್ಲಿ ಬಸ್ ನಿಲ್ಲಿಸುವ ಸಲುವಾಗಿ ಪ್ರತ್ಯೇಕವಾಗಿ ನಿಗದಿಪಡಿಸಿಟ್ಟ ಜಾಗವನ್ನು ಬಸ್-ಬೇ ಎನ್ನುತ್ತಾರೆ. ಇಲ್ಲಿ ರಸ್ತೆಯನ್ನು ಅರ್ಧವೃತ್ತಾಕಾರದಲ್ಲಿ ವಿಸ್ತರಿಸಲಾಗುತ್ತದೆ. ಒಂದು ಕಡೆಯಿಂದ ಒಳ ಹೋದರೆ, ಇನ್ನೊಂದು ಕಡೆಯಿಂದ ಹೊರಗೆ ಬರುವುದು. ಬೇಯಲ್ಲಿ ಬಸ್ ನಿಲ್ಲಿಸಿದರೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಗಳಿಗೆ ಅಡ್ಡಿಯಾಗಲಾರದು. ಬಸ್ ಬೇ ಜಾಗಕ್ಕೆ ಕಾಂಕ್ರೀಟ್ ಹಾಕುವುದರೊಂದಿಗೆ, ಟ್ರಾಫಿಕ್ ಕೋನ್‌ಗಳನ್ನು ಅಳವಡಿಸಲಾಗುತ್ತದೆ. ಸುಸಜ್ಜಿತ ಬಸ್ ಶೆಲ್ಟರ್ ನಿರ್ಮಿಸಲಾಗುತ್ತದೆ.
ಪಾಲಿಕೆ ವ್ಯಾಪ್ತಿಯ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಸಂಚಾರ ವ್ಯವಸ್ಥೆ ಸುಧಾರಿಸುವ ದೃಷ್ಟಿಯಿಂದ ಬಸ್ ಬೇ ನಿರ್ಮಿಸಲು ಉದ್ದೇಶಿಸಲಾಗಿದೆ. ಕಾಮಗಾರಿಯ ಅಂದಾಜು ವೆಚ್ಚ 1.09 ಕೋಟಿ ರೂ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯ ಅನುದಾನದಡಿ ಕಾಮಗಾರಿ ನಡೆಯಲಿದೆ.
ಪ್ರೇಮಾನಂದ ಶೆಟ್ಟಿ ಮೇಯರ್