ಜಿಲ್ಲೆ

ಸಿಟಿ ಬಸ್ ಅವಾಂತರಕ್ಕೆ ಮಹಿಳೆ ಬಲಿ

ಮಂಗಳೂರು: ನಗರದ ಬೆಂದೂರ್‌ವೆಲ್ ಜಂಕ್ಷನ್‌ನಲ್ಲಿ ಸಿಟಿ ಬಸ್ ಡಿಕ್ಕಿ ಹೊಡೆದು ಮಗು ಮೃತಪಟ್ಟು, ತಾಯಿ ಗಂಭೀರ ಗಾಯಗೊಂಡ ಘಟನೆ ಹಸಿಯಾಗಿರುವಾಗಲೇ ಅದೇ ಸ್ಥಳದಲ್ಲಿ ಗುರುವಾರ ಮಧ್ಯಾಹ್ನ ಬಸ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.


ಪೆರ್ಮನ್ನೂರು ನಿವಾಸಿ ಐರಿನ್ ಡಿಸೋಜ (65) ಮೃತಪಟ್ಟವರು. ಇವರು ಬಿಕರ್ನಕಟ್ಟೆಯ ಬಾಲ ಏಸು ಮಂದಿರಕ್ಕೆ ತೆರಳಿ ಮನೆಗೆ ಮರಳುವಾಗ ಈ ಅಪಘಾತ ಸಂಭವಿಸಿದೆ.


ನಗರದ ಸರಿಪಲ್ಲದಿಂದ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ಗೆ ತೆರಳುವ 4ಬಿ ಆ್ಯಸೆಲ್ ಟ್ರಾವೆಲ್ಸ್ ಎಂಬ ಹೆಸರಿನ ಸಿಟಿ ಬಸ್ ಮಧ್ಯಾಹ್ನ 12ಗಂಟೆ ವೇಳೆಗೆ ಬೆಂದೂರ್‌ವೆಲ್ ವೃತ್ತ ಸಮೀಪಕ್ಕೆ ಆಗಮಿಸಿದೆ. ಈ ವೇಳೆ ಐರಿನ್ ಅವರು ಸರ್ಕಲ್ ಬಳಿ ಇಳಿದು ಊರಿಗೆ ಹೋಗುವ ಇನ್ನೊಂದು ಬಸ್ ಹತ್ತುವ ಸಲುವಾಗಿ ತಾನು ಇಳಿದ ಬಸ್ಸಿನ ಮುಂಭಾಗದಿಂದಲೇ ರಸ್ತೆ ದಾಟುತ್ತಿದ್ದಾಗ ಆರೋಪಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೃದ್ಧೆಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಐರಿನ್ ಡಿಸೋಜ ರಸ್ತೆಗೆ ಬಿದ್ದಿದ್ದು, ಅವರ ಮೇಲೆಯೇ ಬಸ್ಸಿನ ಮುಂಭಾಗದ ಬಲಚಕ್ರ ಹರಿದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಸಂಚಾರಿ ಠಾಣಾ ಪೊಲೀಸರು ತಿಳಿಸಿದ್ಧಾರೆ.


ಘಟನೆಯಿಂದ ವಿಚಲಿತನಾದ ಆರೋಪಿ ಚಾಲಕ ವಾಮಂಜೂರು ಮಂಗಳಜ್ಯೋತಿಯ ಭಾಸ್ಕರ್ ಬಸ್‌ನ್ನು ಸ್ಥಳದಿಂದ ಚಲಾಯಿಸಿಕೊಂಡು ಹೋಗಿದ್ದ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.


6 ದಿನದಲ್ಲಿ 2ನೇ ಪ್ರಕರಣ: ಬೆಂದೂರುವೆಲ್ ಜಂಕ್ಷನ್‌ನಲ್ಲಿ ವಾರದೊಳಗೆ ರಸ್ತೆ ಅಪಘಾತಕ್ಕೆ ಸಾವನ್ನಪ್ಪಿದ 2ನೇ ಪ್ರಕರಣ ಇದಾಗಿದೆ. ಮಾ.24ರಂದು ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ ಹೊಡೆದ ಪರಿಣಾಮ ತಾಯಿಯ ಜೊತೆ ದ್ವಿಚಕ್ರ ವಾಹನದಲ್ಲಿದ್ದ 11 ವರ್ಷದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಳೆದ 15ದಿನದಲ್ಲಿ 6ಮಂದಿ ಅಪಘಾತದಲ್ಲಿ ಸಾವನ್ನಪ್ಪಿದಂತಾಗಿದೆ.


ಸಾರ್ವಜನಿಕರ ಆಕ್ರೋಶ: ವೃದ್ಧೆ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಈ ಜಂಕ್ಷನ್‌ನಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಝೀಬ್ರಾ ಕ್ರಾಸಿಂಗ್ ಇಲ್ಲ. ಪೊಲೀಸ್ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ಜರಗಿಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸಂಚಾರದ ಕೆಲವು ನಿಯಮಗಳನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಸಾರ್ವಜನಿಕರು ರಸೆಯಲ್ಲೇ ಪ್ರತಿಭಟನೆ ನಡೆಸಿದ ಕಾರಣ ಕೆಲಕಾಲ ಸಂಚಾರಕ್ಕೆ ಅಡಚಣೆಯಾಯಿತು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಸಂಚಾರ ಉಪವಿಭಾಗದ ಎಸಿಪಿ ಗೀತಾ ಡಿ. ಕುಲಕರ್ಣಿ ಸಾರ್ವಜನಿಕರ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.