* ಗ್ರಾಮಸ್ಥರ ಸಂತಸ * * ಮೊದಲ ಪ್ರಯಾಣ ಸಂಭ್ರಮಿಸಿದ ಗ್ರಾಮಸ್ಥರು
ಸರಗೂರು : ಸ್ವಾತಂತ್ರ್ಯ ಬಂದು 79 ವರ್ಷ ಗತಿಸಿದರೂ ಸಾರಿಗೆ ಬಸ್ ವ್ಯವಸ್ಥೆ ಇಲ್ಲದ ಜೊರಹಳ್ಳ ಗ್ರಾಮದ ಜನರಿಗೆ ಮಂಗಳವಾರ ವಿಶೇಷ ದಿನವಾಗಿತ್ತು. ಅಂತೂ ಗ್ರಾಮಕ್ಕೆ ಕೆಂಪು ಬಸ್ ಬಂತು ಎಂದು ಜನರು ಸಂಭ್ರಮಿಸಿದ್ದು ಗಮನ ಸೆಳೆಯಿತು.
ಸರಗೂರು ಪಟ್ಟಣದಿಂದ ಸಾಗರೆ ಚನ್ನೀಪುರ- ಹೆಗ್ಗನೂರು ಮಾರ್ಗವಾಗಿ ಜೊರಹಳ್ಳ ಗ್ರಾಮಕ್ಕೆ ನೇರವಾಗಿ ಬಂದ ಬಸ್‌ಗೆ ಹಳ್ಳಿಯ ಮುಖಂಡರು,ಸಾರ್ವಜನಿಕರು ಪೂಜೆ ಸಲ್ಲಿಸಿ ಖುಷಿ ಪಟ್ಟರು.
ಕಳೆದ ಹತ್ತಾರು ವರ್ಷಗಳಿಂದ ಗ್ರಾಮಸ್ಥರು ನೂರಾರು ಬಾರಿ ತಾಲೂಕು ಆಡಳಿತ, ಶಾಸಕರು ಮತ್ತು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರಕದ ಕಾರಣ ಖೇದಗೊಂಡಿದ್ದರು. ಆದರೆ ಮಂಗಳವಾರ ಬಸ್ ಸಂಚಾರ ವ್ಯವಸ್ಥೆ ಪ್ರಾರಂಭವಾದ ಸಂದರ್ಭ ಹಿಂದಿನ ಹತಾಶೆಗಳೆಲ್ಲವೂ ಮಾಯವಾಗಿ ಸಂತಸ ತುಂಬಿತ್ತು. ಬಸ್‌ಗೆ ಪೂಜೆ ಸಲ್ಲಿಸಿದ ನಂತರ ಮೊದಲ ಟ್ರಿಪ್‌ನ ಚಾಲಕ ಮತ್ತು ನಿರ್ವಾಹಕರಿಗೂ ಸನ್ಮಾನಿಸಿದ್ದು ಗಮನ ಸೆಳೆಯಿತು.
ಈ ಸಂದರ್ಭ ಮಾತನಾಡಿದ ಮುಖಂಡ ದೇವಲಾಪುರ ನಾಗೇಂದ್ರ, ಈ ಭಾಗದ ಜನತೆಯ ಬಹುದಿಗಳ ಬೇಡಿಕೆ ಇಂದು ಈಡೇರಿದೆ ಎಂಬುದೇ ಸಂಭ್ರಮ ಎಂದರು. ಸರಗೂರು ಪಟ್ಟಣದಿಂದ ಸಾಗರೆ ಚನ್ನೀಪುರ.ಹೆಗ್ಗನೂರು ಮಾರ್ಗವಾಗಿ ಜೊರಹಳ್ಳ ಗ್ರಾಮಕ್ಕೆ ನೇರವಾಗಿ ನಿತ್ಯವೂ
ಬಸ್ ಸಂಚಾರ ದೊರಕಿದೆ. ಈ ನಿಟ್ಟಿನಲ್ಲಿ ಗ್ರಾಮದ ಜನರು ಮತ್ತು ಮುಖಂಡರು ಶಾಸಕ ಅನಿಲ್ ಚಿಕ್ಕಮಾದು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಡಿದ ಮನವಿ ಫಲ ನೀಡಿದೆ ಅವರಿಗೆ ಗ್ರಾಮಸ್ಥರು ಕೃತಜ್ಞರಾಗಿದ್ದಾರೆ ಎಂದರು.
ಗ್ರಾಮಸ್ಥ ಪ್ರಸಾದ್ ಮಾತನಾಡಿ, ಬಸ್ ಸಂಚಾರ ಇಂದಿನಿಂದ ಆರಂಭವಾಗಿದ್ದು ಹಲವರಿಗೆ ಅನುಕೂಲಕರವಾಗಿದೆ ಎಂದರು. ಕಳೆದ 79 ವರ್ಷಗಳಿಂದ ಗ್ರಾಮಸ್ಥರಿಗೆ, ಅದರಲ್ಲೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿತ್ತು. ವಿದ್ಯಾರ್ಥಿಗಳು ಪಾಟಿ ಚೀಲ ಹಾಕಿಕೊಂಡು ಐದಾರು ಕಿ.ಮೀ. ದೂರದ ಶಾಲೆಗೆ ನಡೆದೇ ಹೋಗಬೇಕಿತ್ತು. ಬಸ್ ವ್ಯವಸ್ಥೆಯೇ ಇಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಮನೆ ಬಿಟ್ಟು ಪರ ಊರಿನಲ್ಲಿ ವಾಸವಿದ್ದರು. ಇನ್ನು ಮುಂದೆ ತಾಲೂಕು ಕೇಂದ್ರದ ಶಾಲೆಗಳಿಗೆ ಮಕ್ಕಳು ನೇರವಾಗಿ ಮನೆಯಿಂದಲೇ ತೆರಳಲಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಸಾರಿಗೆ ಅಧಿಕಾರಿಗಳ ಸಹಕಾರ ದೊಡ್ಡದು ಎಂದರು.
ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಚೆಲುವರಾಜು ಮಾತನಾಡಿದರು.ಯಜಮಾನರಾದ ರಂಗಯ್ಯ, ಚಿಕ್ಕಣ್ಣ, ಗ್ರಾಮದ ಮುಖಂಡರಾದ ವಿಷಕಂಠ, ಶ್ರೀನಿವಾಸ,ನಾಗಯ್ಯ, ಸೋಮಣ್ಣ, ನಾಗೇಂದ್ರ, ರಾಮು, ಸಿದ್ದಯ್ಯ, ಚಿನ್ನಯ್ಯ, ಸೋಮಯ್ಯ, ಕೃಷ್ಣೇಗೌಡ, ಇತರರು ಹಾಜರಿದ್ದರು.
* ದಿನಕ್ಕೆ 3 ಟ್ರಿಪ್
ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು, ಕೃಷಿಕರು, ರೋಗಿಗಳು ಮತ್ತು ವೃದ್ಧರು ಜೊರಹಳ್ಳದಿಂದ 4 ಕಿ. ಮೀ. ದೂರ ನಡೆದುಕೊಂಡು ಜೊರಹಳ್ಳ ಗೇಟ್ ಬಳಿ ಬಿ. ಮಟಕರೆ ಹಾಗೂ ಹಂಚೀಪುರ ಮಾರ್ಗವಾಗಿ ಸಾಗುವ ಬಸ್ ಹಿಡಿದುಕೊಂಡು ಸರಗೂರು ಪಟ್ಟಣಕ್ಕೆ ಸಾಗುವ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಣಕ್ಕೆ ತೆರಳಬೇಕಾದರೆ ದೊಡ್ಡ ಸಮಸ್ಯೆಯೇ ಆಗಿತ್ತು. ಮಂಗಳವಾರದಿಂದ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರಕಿದೆ. ಸರಗೂರು ಪಟ್ಟಣಯಿಂದ ಚನ್ನೀಪುರ - ಹೆಗ್ಗನೂರು ಮಾರ್ಗವಾಗಿ ಜೊರಹಳ್ಳ ಗ್ರಾಮಕ್ಕೆ ನಿತ್ಯ ಮೂರು ಟ್ರಿಪ್ ಮೂಲಕ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ.
*
ಮೊದಲ ಪ್ರಯಾಣ : ಗ್ರಾಮಕ್ಕೆ ಮೊದಲ ಬಾರಿ ಆಗಮಿಸಿದ ಕೆಂಪು ಬಸ್ ಕಂಡು ಮಕ್ಕಳಾದಿಯಾಗಿ ಎಲ್ಲರಲ್ಲೂ ಹರ್ಷ ಮನೆ ಮಾಡಿತ್ತು. ಗ್ರಾಮಸ್ಥರು ಬಸ್‌ಗೆ ತಳಿರು- ತೋರಣ ಕಟ್ಟಿ ಪೂಜೆ ಮಾಡಿದರು. ಖುಷಿಯಿಂದಲೇ ವಾಹನವನ್ನು ಬರಮಾಡಿಕೊಂಡರು. ಗ್ರಾಮಸ್ಥರೆಲ್ಲರೂ ಒಮ್ಮೆ ಬಸ್ ಹತ್ತಿಳಿದು ಸಂತಸ ವ್ಯಕ್ತಪಡಿಸಿದರು. ಅನೇಕರು ಮೊದಲ ಪ್ರಯಾಣ ಮಾಡಿ ಖುಷಿ ವ್ಯಕ್ತಪಡಿಸಿದರು.
ಹೆಚ್ಚಿನ ವ್ಯವಸ್ಥೆ ಮಾಡುತ್ತೇನೆ: ಜೊರಹಳ್ಳ ಗ್ರಾಮಕ್ಕೆ ಸಾರಿಗೆ ಬಸ್ ಸೇರಿದಂತೆ ಹಲವು ಸೌಲಭ್ಯಗಳ ಕೊರತೆ ಇದೆ. ಗ್ರಾಮಸ್ಥರು ಬಸ್ ಸಮಸ್ಯೆ ಗಮನಕ್ಕೆ ತಂದಿದ್ದರು. ಕೆಎಸ್‌ಆರ್‌ಟಿಸಿ ಡಿಸಿ ಅವರೊಂದಿಗೆ ಚರ್ಚೆ ನಡೆಸಿ ಬಸ್ ರೂಟ್ ಕಲ್ಪಿಸಲಾಗಿದೆ. ಗ್ರಾಮಸ್ಥರು ಊರಿನಲ್ಲಿ ಬಸ್ಸೇ ನೋಡಿದ್ದಿಲ್ಲ. ಅವರ
ಸಂತೋಷದಲ್ಲಿ ನಾನೂ ಇದ್ದೇನೆ. ಶಾಲೆಯ ಮಕ್ಕಳು 3- 4 ಕಿ. ಮೀ. ನಡೆಯುವುದು ಇಂದಿನಿಂದ ತಪ್ಪಿದೆ. ಜನರ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಟ್ರಿಪ್ ಬೇಕಾಗಿದ್ದರೆ ಅದನ್ನೂ ಮಾಡಿಸುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ದೂರವಾಣಿ ಮೂಲಕ ವಿಜಯವಾಣಿಗೆ ತಿಳಿಸಿದರು.