ಜಿಲ್ಲೆ

ಹಾರಂಗಿಯಲ್ಲಿ ಬಸ್ ತಡೆದು ಪ್ರತಿಭಟನೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ತಾಲೂಕು ಹಾರಂಗಿ ಗ್ರಾಮದ ಡ್ಯಾಮ್ ಮುಂಭಾಗದ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ಶಾಲಾ ಮಕ್ಕಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಒಟ್ಟಾಗಿ ಕೆಎಸ್‌ಆರ್‌ಟಿಸಿ ಬಸ್ ತಡೆದು ಮಂಗಳವಾರ ಪ್ರತಿಭಟನೆ ಮಾಡಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಹಾರಂಗಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ಬಸ್ ಸಂಚಾರಕ್ಕೆ ಕೇವಲ 300 ಮೀಟರ್ ದೂರದಲ್ಲಿ ಬದಲಿ ರಸ್ತೆ ಇದ್ದರೂ ಬಸ್ ಚಾಲಕರು ಹೋಗುವುದಿಲ್ಲ.

ಇದರಿಂದಾಗಿ ಡ್ಯಾಮ್ ಮುಂಭಾಗದ ಬಸ್ ನಿಲ್ದಾಣಕ್ಕೆ 1ರಿಂದ 2 ಕಿಲೋಮೀಟರ್ ದೂರದಿಂದ ನಡೆದುಕೊಂಡು ಬರುವ ಯಡವನಾಡು ಮತ್ತು ಹುದುಗೂರು ಗ್ರಾಮದ ಶಾಲಾ ಮಕ್ಕಳು ಕೂಲಿ ಕಾರ್ಮಿಕರು ಹಾಗೂ ಹಾರಂಗಿ ಗ್ರಾಮದ ಶಾಲಾ ಕಾಲೇಜಿನ ಮಕ್ಕಳು, ಕೂಲಿ ಕಾರ್ಮಿಕರು ಬಸ್‌ಗಾಗಿ ಮತ್ತೆ 1 ಕಿ.ಮೀ.ನಷ್ಟು ನಡಿಯುವಂತಾಗಿದೆ.

ಈ ಬಗ್ಗೆ ಈಗಾಗಲೇ ಕುಶಾಲನಗರದ ಬಸ್ ನಿಲ್ದಾಣದ ಪ್ರöಮುಖರಿಗೆ, ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ಮ್ಯಾನೇಜರ್‌ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಹಾಗಾಗಿ ಬಸ್ ತಡೆದು ಪ್ರತಿಭಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸದೆ ಹೋದಲ್ಲಿ ಶಾಲಾ ಮಕ್ಕಳು ಗ್ರಾಮಸ್ಥರು ಸೇರಿ ಉಗ್ರ ಪ್ರತಿಭಟನೆ ಮಾಡುವುದಾಗಿ ಹೇಳಿದರು. ಈ ಸಂದರ್ಭ ಶಾಲಾ ಕಾಲೇಜಿನ ಮಕ್ಕಳು, ಗ್ರಾಮಸ್ಥರಾದ ಅಪ್ಪಾಜಿ, ರಘು, ರಾಜ, ವೇಲನ್, ಸತೀಶ್, ಮಂಜು ಮತ್ತಿತರರು ಇದ್ದರು.