ಜಿಲ್ಲೆ

ಧಗಧಗಿಸಿದ ಆಯಿಲ್ ಕಾರ್ಖಾನೆ

ಸುಟ್ಟು ಕರಕಲಾದ ಲಕ್ಷಾಂತರ ಮೌಲ್ಯದ ವಸ್ತುಗಳು | ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

ಆನೇಕಲ್:ತಾಲೂಕಿನ ಹೀಲಲಿಗೆ ಗ್ರಾಮದಲ್ಲಿನ ಖಾಸಗಿ ಕಾರ್ಖಾನೆಯಲ್ಲಿ ಭಾನುವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆ ಆವರಿಸಿ, ಸುತ್ತಮುತ್ತ ದಟ್ಟ ಹೊಗೆಯಿಂದ ಆತಂಕ ಸೃಷಿಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಸಂಜೆವರೆಗೂ ಬೆಂಕಿ ಹತೋಟಿಗೆ ಬಂದಿರಲಿಲ್ಲ. ಕಾರ್ಖಾನೆ ಪೂರ್ತಿ ಆಯಿಲ್ ಬ್ಯಾರಲ್‌ಗಳಿದ್ದ ಕಾರಣ ಬೆಂಕಿ ಕೆನ್ನಾಲಗೆ ಜೋರಾಗಿತ್ತು. ಅವಘಡದಲ್ಲಿ ಬಹುತೇಕ ಆಯಿಲ್ ಬ್ಯಾರಲ್‌ಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಬೆಂಕಿ ಹತೋಟಿಗೆ ಬಾರದ ಹಿನ್ನೆಲೆ ಹುಳಿಮಾವು ಹಾಗೂ ಜಯನಗರದಿಂದ ಅಗ್ರಿಶಾಮಕ ದಳ ಸೇರಿ 10 ಅಗ್ನಿಶಾಮಕ ವಾಹನಗಳಿಂದ ನೀರು ಹರಿಸಿ ಬೆಂಕಿ ಹತೋಟಿಗೆ ತರಲು ಸಿಬ್ಬಂದಿ ಹರಸಾಹಸ ಪಟ್ಟರು. ಸೂರ್ಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಪ್ಪಿದ ದೊಡ್ಡ ಅಪಘಾತ: ಬೆಳಗ್ಗೆ 7 ಗಂಟೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಒತ್ತಿಕೊಂಡಿದೆ ಎನ್ನಲಾಗಿದ್ದು, ಕಾರ್ಖಾನೆಯಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಭಾನುವಾರದ ಕಾರಣ ಕಾರ್ಮಿಕರು ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ದೊಡ್ಡ ಅನಾಹುತ ತಪ್ಪಿದೆ.

ಜನನಿಬಿಡ ಪ್ರದೇಶದಲ್ಲಿ ಕಾರ್ಖಾನೆ: ಹೀಲಲಿಗೆ ಗ್ರಾಮದ ಮಧ್ಯೆ ಆಯಿಲ್ ಕಾರ್ಖಾನೆಗೆ ಜಾಗ ನೀಡಲಾಗಿತ್ತು. ಇಂತಹ ಪ್ರದೇಶದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಅನುಮತಿ ಹೇಗೆ ನೀಡಲಾಯಿತು? ಹಾಗೂ ಅನುಮತಿ ನೀಡುವ ಮೊದಲು ಕಾನೂನು ಪಾಲನೆ ಮಾಡಡಿಲ್ಲ ಎಂಬ ಆರೋಪ ಕೇಳಿಬಂದಿವೆ.

ಎತ್ತ ನೋಡಿದರೂ ಹೊಗೆ: ಆಯಿಲ್ ಬ್ಯಾರೆಲ್‌ಗಳು ಒಂದೊಂದಾಗಿ ಬ್ಲಾಸ್ಟ್ ಆಗುತ್ತಿದ್ದಂತೆ ದಟ್ಟ ಬೆಂಕಿ ಕೆನ್ನಾಲಿಗೆ ಆವರಿಸುತ್ತಿದ್ದ ಹಿನ್ನೆಲೆ ಸುತ್ತಮುತ್ತ ಆಗಸದವರೆಗೆ ಹೋಗೆ ಆವರಿಸಿತ್ತು. ಚಂದಾಪುರದ ಅಕ್ಕಪಕ್ಕದಲ್ಲಿ ಎಲ್ಲಿ ನೋಡಿದರೂ ಕಪ್ಪು ಹೋಗೆ ತುಂಬಿತ್ತು.

ನೂರು ಸಿಬ್ಬಂದಿ ಕಾರ್ಯಾಚರಣೆ: ಅಗ್ನಿಶಾಮಕ ದಳದ ಒಟ್ಟು ನೂರು ಸಿಬ್ಬಂದಿ, ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರು. ಬೆಂಕಿ ಹತ್ತೋಟಿಗೆ ತರುವಲ್ಲಿ ಯಶಸ್ವಿ ಆದರೂ ಅಕ್ಕಪಕ್ಕದಲ್ಲಿ ಮನೆಗಳು ಇದ್ದ ಕಾರಣ ಜಾಗರೂಕತೆ ವಹಿಸಲಾಗಿತ್ತು.

ಸುರಕ್ಷತಾ ಸಾಧನಗಳಿದ್ದರೂ ಕೈಕೊಟ್ಟ ಕರೆಂಟ್: ಕಾರ್ಖಾನೆಯ ಒಳಗೆ ಸಾಕಷ್ಟು ಸುರಕ್ಷತಾ ಸಾಧ ಇರಿಸಲಾಗಿತ್ತು ಎಂದು ಕಾರ್ಖಾನೆಯ ಆಡಳಿತ ಮಂಡಳಿ ಹೇಳಿದ್ದು, ಅವಘಡ ಸಂಭವಿಸಿದಾಗ ವಿದ್ಯುತ್ ಕಡಿತವಾಗಿದ್ದ ಕಾರಣ ಯಾವುದು ಉಪಯೋಗಕ್ಕೆ ಬಂದಿಲ್ಲ.