ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಬದ್ಧತೆ ಬಗ್ಗೆ ಮಾತಾಡುವುದು ತಪ್ಪು, ಅಪರಾಧವೇನೋ? ಸಾಮಾಜಿಕ ಬದ್ಧತೆ ಇರುವುದು ಒಳ್ಳೆಯ ಕವಿತೆ ಆಗಲಾರದೇನೋ? ಎಂಬ ತೊಳಲಾಟಕ್ಕೆ ಈಗಿನ ಕವಿಗಳು ಬಿದ್ದಿದ್ದಾರೆ ಎಂದು ಹಿರಿಯ ಲೇಖಕಿ ಡಾ. ವಿನಯಾ ವಕ್ಕುಂದ ಹೇಳಿದರು.
ಸಮುದಾಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜೋಸೆಫ್ ಮಲ್ಲಾಡಿ ಅವರ ಸುಡುವ ಕನಸುಗಳು ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವರ್ತಮಾನ ಎದುರಿಟ್ಟುಕೊಂಡು ಕಾವ್ಯ ರಚನೆ ಮಾಡುವುದು ಬಹಳ ಸವಾಲಿನ ಕೆಲಸ. ಆ ಸವಾಲನ್ನು ಕವಿ ಜೋಸೆಫ್ ತುಂಬಾ ಮುಖ್ಯವಾದ ಧಾತುವಿನಲ್ಲಿ ಎದುರಿಸಿದ್ದಾರೆ. ಸಮಾಜದ ಪರವಾಗಿ ನಿಂತು ಕೆಲಸ ಮಾಡುವಂತಹ ವ್ಯಕ್ತಿ, ರಾಜ್ಯಮಟ್ಟದ ಪ್ರಶಸ್ತಿಗಳು ಬಂದರೂ ಅವರಲ್ಲಿರುವ ವಿನಮ್ರತೆ, ಧನ್ಯತೆ ಕಡಿಮೆ ಆಗಿಲ್ಲ ಎಂದರು.
ಕಲಘಟಗಿ ಗುಡ್ ನ್ಯೂಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಿ.ಜಿ. ಬಿರಾದಾರ ಮಾತನಾಡಿದರು. ಸಮುದಾಯದ ಅಧ್ಯಕ್ಷ ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಿದ್ದರು.
ಈರಣ್ಣ ಐನಾಪುರ ಸ್ವಾಗತಿಸಿದರು. ಬಿ. ಎಚ್. ಕುರಿಯವರ ನಿರೂಪಿಸಿದರು. ಭೂಮಿ ಪತ್ತಾರ ವಂದಿಸಿದರು.